Monday, January 3, 2011

ಕವಿಶೈಲ

ಸೊಗಸಾದ ಕುಳಿರ್ಗಾಳಿ
ತರುಲತೆಗಳ ವಯ್ಯಾರ
ಝರಿ ತೊರೆಗಳ ಕಲರವ
ಹಕ್ಕಿ ಪಕ್ಕಿಗಳ ಪಕ್ಕವಾದ್ಯ
ಎಲ್ಲಾ ಒಂದೆಡೆ ಮೇಳೈಸೆ
ಇನ್ನಾವ ಸ್ವರ್ಗದ ಬಯಕೆ ಬಂದೀತು?

ಹೌದು ಗೆಳೆಯರೆ,
ನಾನು ಹೇಳಹೊರಟಿರುವುದು ಮಲೆನಾಡಿನ ಬಗ್ಗೆಯೇ!
ಊರಿನಿಂದ ಬಂದ ನಂತರ ನಿಮ್ಮೊಂದಿಗೆ ಹಂಚಿಕೊಳ್ಳಲು ಹಲವಾರು ವಿಷಯಗಳಿದ್ದವು. ಸಮಯದ ಅಭಾವವೋ ಅಥವಾ ನನ್ನ ಸೋಮಾರಿತನವೋ ಬ್ಲಾಗ್ ಕಡೆ ಬರುವುದು ಅಪರೂಪವಾಗಿತ್ತು. ನಿರಂತರ ಬ್ಲಾಗ್ ಬೇಟಿ ಕೇವಲ ಮನದಲ್ಲೇ ಉಳಿಯಿತೇ ಹೊರತು ಕಾರ್ಯರೂಪಕ್ಕೆ ಬರಲಿಲ್ಲ. ಆದರೂ ಪರವಾಗಿಲ್ಲ. ನಾನೂ ನಿಮ್ಮೊಳಗೊಬ್ಬನಲ್ಲವೆ, ಕ್ಷಮಿಸಿ ಪೋಷಿಸುತ್ತೀರಾ ಅನ್ನೊ ನಂಬಿಕೆಯಿಂದ ಮತ್ತೆ ನಿಮಗೆಲ್ಲಾ ಕಷ್ಟ ಕೊಡಲು ಬಂದಿದ್ದೇನೆ! ನೀವು ಸಹಿಸಿಕೊಳ್ಳಲೇಬೇಕು, ಇದು ಅನಿವಾರ್ಯ!

ಏನೇನೊ ಹೇಳುತ್ತ ಮುಖ್ಯ ವಿಷಯವನ್ನೇ ಮರೆತೆ. ನಾನು ಇಂದು ಹೇಳಹೊರಟಿದ್ದು ನನ್ನ ಕುಪ್ಪಳ್ಳಿ ಭೇಟಿಯ ಕುರಿತು. ಹೌದು, ಇತ್ತೀಚೆಗೆ ಕುಪ್ಪಳ್ಳಿಗೆ ಹೋಗಿದ್ದೆ. ಕವಿವರ್ಯರ ತಪೋವನ ಕವಿಶೈಲದಲ್ಲಿ ಕಳೆದ ಒಂದೊಂದು ಕ್ಷಣವೂ ಅವಿಸ್ಮರಣೀಯ! ಬಣ್ಣಿಸಲಾಗದ ಆ ಸುಖದ ಕೆಲವು ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ.

ಹೊರಟಿದ್ದು ಇಬ್ಬರಾದರೂ ಕವಿಶೈಲವನ್ನು ಮುಟ್ಟುವಾಗ ನಾನೊಬ್ಬನೇ ಇದ್ದಿದ್ದು! ಹ್ನಾಂ! ಇರಿ, ಹೇಳಿ ಮುಗಿಸುವುದರೊಳಗೆ ಆಶ್ಚರ್ಯ ಪಡ್ತೀರಲ್ಲ? ನನ್ನ ಸ್ನೇಹಿತ ಮಹಾಶಯ ಮಧ್ಯದಲ್ಲೇ ಕೈ ಕೊಟ್ಟು ತನ್ನ ಮನದನ್ನೆಯನ್ನು ಭೇಟಿಯಾಗಲು ಹೊರಟು ಹೋದ! ಇನ್ನೇನು ಮಾಡಲಿ, ಒಬ್ಬನೆ ಆದರೆ ಏನಾಯ್ತು ಎಂದು ಹೊರಟೇ ಬಿಟ್ಟೆ. 

ಕವಿಶೈಲ ತಲುಪಿದಾಗಲೇ ಅರಿವಾಗಿದ್ದು, ನಾನೊಬ್ಬನೆ ಬಂದಿದ್ದು ಒಳ್ಳೆಯದೇ ಆಯಿತೆಂದು. 

ನೂರಾರು ಸತ್ಯಗಳನ್ನು ತನ್ನ ಒಡಲಲ್ಲಿ ಅಡಗಿಸಿಕೊಂಡು ನಿಶ್ಚಿಂತವಾಗಿ ಹರಡಿದ್ದ ಸಹ್ಯಾದ್ರಿಯ ಗಿರಿಶೃಂಗ, ದೂರದಿಂದ ಕೇಳಿಬರುತ್ತಿರುವ ತುಂಗೆಯ ಬೋರ್ಗರೆತ, ಕುಹುಗುಡುವ ಕಾಜಾಣಗಳ ಹಿಂಡು, ಹಕ್ಕಿಯ ಹಾಡಿಗೆ ತಲೆದೂಗುವ ಬಿದಿರು, ಜಿಟಿಪಿಟಿ ಮಳೆಯ ಶೃಂಗಾರ ಕಾವ್ಯ..... ಸುಖದ ಸುಪ್ಪತ್ತಿಗೆಯಲ್ಲಿ ಮೈ ಮರೆತು ಇಹಲೋಕದ ಜಂಜಡಗಳಿಲ್ಲದೇ ಚಿರನಿದ್ರೆಯಲ್ಲಿರುವ ರಾಷ್ಟ್ರಕವಿ ನಮ್ಮೆಲ್ಲರ ಮೆಚ್ಚಿನ ಕುವೆಂಪಜ್ಜ!!!!!

ಹೌದು, ಕವಿಶೈಲದ ಮಹಿಮೆಯೇ ಅಂತಹುದು, ಎಂಥಾ ಅರಸಿಕನಾದರೂ ಕಾವ್ಯದ ರುಚಿ ಸವಿಯಬಲ್ಲ! ಕವಿಯಾಗಬಲ್ಲ,  ರವಿಯನ್ನೇ ಶಾಂತವಾಗಿಸಿ ಚಂದ್ರನಂತೆ ತಣ್ಣಗಾಗಿಸಬಲ್ಲ. ಸಂಗೀತದ ಕಾರಂಜಿ ಹರಿಸಬಲ್ಲ, ತಕದಿಮಿ ಕುಣಿಯಬಲ್ಲ! ಯಾಕೆಂದರೆ ಅಲ್ಲಿ ಕುವೆಂಪಜ್ಜನ ತಪೋಬಲವಿದೆ, ಅವರ ಶಕ್ತಿಯಿದೆ, ಅಲ್ಲಿಯ ಪರಿಸರದಲ್ಲಿ ಪಸರಿಸಿರುವ ಅವರ ನೆನಪು ಈ ಶಕ್ತಿಯನೆಲ್ಲಾ ಕೊಡಬಲ್ಲದು!

ಬೆಳಿಗ್ಗೆಯಿಂದ ಸಂಜೆಯವರೆಗೂ ಒಬ್ಬನೇ ಕುಳಿತೇ ಇದ್ದೆ. ಏನೋ ರೋಮಾಂಚನ, ಮೈಯೆಲ್ಲಾ ಪುಳಕಗೊಂಡ ಅನುಭವ! ಆ ಕ್ಷಣದ ಸುಖ ಯಾವ ಸುಖಕ್ಕೂ ಸಮನಲ್ಲ. ಕೋಟ್ಯಂತರ ಖರ್ಚುಮಾಡಿ ಪಡೆಯುವ ಕೃತಕ ಸುಖಕ್ಕಿಂತ ಕವಿಶೈಲದಲ್ಲಿ ಸಿಗುವ ನೆಮ್ಮದಿ ಸಂತೋಷದ ಕ್ಷಣಗಳು ಎಷ್ಟೋ ಮೇಲು. ಅದಕ್ಕೆ ಸಾಟಿಯೆಂಬುದಿಲ್ಲ!

ಕುಳಿತೆ, ಕುಳಿತೆ ಕುಳಿತೇ ಇದ್ದೆ, ಕಾವಲುಗಾರ ಬಂದು ಎಚ್ಚರಿಸದಿದ್ದರೆ ಅಲ್ಲೇ ಇರುತಿದ್ದೆನೋ ಏನೋ! ನಂತರ ನಿದಾನಕ್ಕೆ ಎದ್ದು ಮಗದೊಮ್ಮೆ ಕವಿವರ್ಯರ ಸಮಾದಿಗೆ ವಂದಿಸಿ ಒಲ್ಲದ ಮನಸ್ಸಿನಿಂದ ಕೆಳಗಿಳಿದು ಬಂದೆ. ಕುವೆಂಪಜ್ಜ ವಾಸಿಸುತ್ತಿದ್ದ ಮನೆಗೆ ಬಂದು ಅವರ ಜೀವನದ ಅವಿಭಾಜ್ಯ ಅಂಗಗಳಾದ ಎಷ್ಟೊ ವಸ್ತುಗಳನ್ನು ನೋಡಿ ಕಣ್ದುಂಬಿಕೊಂಡೆ. ಕತ್ತಲಾವರಿಸತೊಡಗಿದಂತೆ ಅನಿವಾರ್ಯವಾಗಿ ಮನೆಯ ದಾರಿ ಹಿಡಿದೆ. ಕರ್ತವ್ಯದ ಕರೆಗೆ ಓಗೊಡಲೇಬೇಕಾದ ಅನಿವಾರ್ಯತೆ ಮನೆಯತ್ತ ಕೈಬೀಸಿ ಕರೆದಿತ್ತು.

ಕುವೆಂಪಜ್ಜನ ಹಲವಾರು ಕವನಗಳನ್ನು ಕಲ್ಲಿನಲ್ಲಿ ಕೆತ್ತಿ ಅಲ್ಲಿ ಪ್ರತಿಷ್ಟಾಪಿಸಿದ್ದಾರೆ. ಅವುಗಳಲ್ಲೊಂದು ಕವಿಶೈಲದ ಬಗ್ಗೆ ಬರೆದ ಕವನ.


"ಮಿತ್ರರಿರೆ, ಮಾತಿಲ್ಲಿ ಮೈಲಿಗೆ,ಸುಮ್ಮನಿರಿ,
ಮೌನವೇ ಮಹತ್ತಿಲ್ಲಿ, ಈ ಬೈಗು ಹೊತ್ತಿನಲಿ
ಕವಿಶೈಲದಲಿ, ಮುತ್ತಿಬಹ ಸಂಜೆಗತ್ತಲಲಿ
ಧ್ಯಾನಸ್ಥ ಯೋಗಿಯಾಗಿದೆ ಮಹಾ ಸಹ್ಯಗಿರಿ!

ಮುಗಿಲ್ದೆರೆಗಳಾಗಸದಿ ಮುಗುಳ್ನಗುವ ತದಿಗೆಪೆರೆ
ಕೊಂಕು ಬಿಂಕವ ಬೀರಿ ಬಾನ್ದೇವಿ ಚಂದದಲಿ
ನೋಂತ ಸೊಡರಿನ ಹಣತೆಹೊಂದೋಣಿಯಂದದಲಿ
ಮೆರೆಯುತ್ತ ಮತ್ತೆ ಮರೆಯಾಗುತ್ತ ತೇಲುತಿರೆ
ಬೆಳಕು ನೆಳಲೂ ಸೇರಿ ಶಿವಶಿವಾಣಿಯರಂತೆ
ಸರಸವಾಡುತಿವೆ ಅದೋ ತರುಲತ ಧರಾತಲದಿ!

ಪಟ್ಟಣದಿ, ಬೀದಿಯಲಿ, ಮನೆಯಲ್ಲಿ ಸರ್ವತ್ರ
ಇದ್ದೇ ಇದೆ ನಿಮ್ಮ ಹರಟೆಯ ಗುಲ್ಲು! ಆ ಸಂತೆ
ಇಲ್ಲೇಕೆ? ಪ್ರಕೃತಿ ದೇವಿಯ ಸೊಬಗು ದೇಗುಲದಿ
ಆನಂದವೇ ಪೂಜೆ; ಮೌನವೇ ಮಹಾಸ್ತೊತ್ರ!

ಯೋಚಿಸಿನೋಡಿ, ಇಷ್ಟೊಂದು ಅದ್ಭುತ ಕವನದ ಹುಟ್ಟು ಅವರಿಗೆ ಕವಿಶೈಲದ ಮೇಲಿದ್ದ ಅಘಾದ ಭಕ್ತಿಗೆ ಸಾಕ್ಷಿಯಲ್ಲವೇ? ತನ್ನ ತಾಯಿಯಂತೆ ಪೂಜಿಸಿ ಗೌರವಿಸುತ್ತಿದ್ದ ಕವಿಶೈಲ ಮೈಲಿಗೆಗೊಳಗಾಗುವುದು ಅರಗಿಸಲಾಗದ ಕಷ್ಟ ಅವರಿಗೆ!

ಗೆಳೆಯರೆ, ನೀವೂ ಹೋಗಿಬನ್ನಿ ಕವಿಯ ತಪೋವನ ಕವಿಶೈಲಕೆ, ಅಲ್ಲಿ ಸಿಗುವ ಸಂತೋಷವನ್ನು ನಾ ಹೇಳಲಾರೆ, ಅನುಭವಿಸಿ ಬನ್ನಿ. ನೀವೇ ಹೇಳಿ!


ಮಿತ್ರರಿರೆ,
ಸುಮ್ಮನಿರಿ, ಸದ್ದು ಮಾಡದಿರಿ
ವಿಶ್ವಮಾನವ ಸಂದೇಶ ಸಾರಿದ
ಮಹನೀಯನಿಹರಿಲ್ಲಿ
ಮಲಗಿಹರಿಲ್ಲಿ ಚಿರನಿದ್ರೆಯಲಿ
ಮಹಾಕವ್ಯ ಬರೆದ ದಣಿವಿನಲಿ
ಸಾಹಿತ್ಯ ಕೃಷಿಯ ಹರಿಕಾರ
ಜ್ನಾನಪೀಠ ಪಡೆದ ಸರದಾರ
ಮಲಗಿಹರಿಲ್ಲಿ, ಚಿರನಿದ್ರೆಯಲಿ............
ಸದ್ದು ಮಾಡದಿರಿ...........


ಅಲ್ಲಿ ನಾನು ತೆಗೆದ ಒಂದಿಷ್ಟು ಫೋಟೋಗಳು ನಿಮಗಾಗಿ........