Tuesday, April 27, 2010

ಚಿರಋಣಿ ನಿಮ್ಮೆಲ್ಲರಿಗೂ.........

ಸ್ನೇಹಿತರೆ,
        ನಿಮ್ಮೆಲ್ಲರಿಗೂ ಹೇಗೆ ಕೃತಜ್ಞತೆ ಸಲ್ಲಿಸಲೋ ನಾನರಿಯೆ...
ಅಮ್ಮನಿಗೆ ಅಪಘಾತವಾಗಿ ದಿಕ್ಕೇ ತೋಚದಂತಾಗಿದ್ದ ಸಂದರ್ಭದಲ್ಲಿ ಮನಸ್ಸು ತಡೆಯಲಾರದೆ
ನಿಮ್ಮೊಂದಿಗೆ ಹಂಚಿಕೊಂಡಿದ್ದೆ. ಅದರ ಮರುದಿನವೇ ಮನೆಗೆ ಹೋಗಿದ್ದರಿಂದ ಇಂದಿನವರೆಗೂ
ಗಣಕಯಂತ್ರವನ್ನು ಮುಟ್ಟಿರಲಿಲ್ಲ. ಆದರೆ ಇಂದು ಬ್ಲಾಗ್ ತೆರೆದ ನನಗೆ ನಿಮ್ಮೆಲ್ಲರ ಹಾರೈಕೆ ಕಾದಿತ್ತು.


        ನಿಜವಾಗಿಯೂ ನಿಮ್ಮೆಲ್ಲರಿಗೂ ನಾನು ಚಿರಋಣಿ. ನಿಮ್ಮೆಲ್ಲರ ಹಾರೈಕೆಯಿಂದ ನನ್ನಮ್ಮ
ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಯ ಹಾಸಿಗೆ ಬಿಟ್ಟು ಮನೆಯಲ್ಲಿ ಓಡಾಡಿಕೊಂಡಿದ್ದಾರೆ. ದೇವರ
ದಯೆಯಿಂದ ಅಮ್ಮನ ಮುಖ ನಗುಮೊಗದಿಂದ ಕೂಡಿದೆ.


        ಆದರೆ ಅಮ್ಮನ ಹಠ ಮಾತ್ರ ಕಡಿಮೆಯಾಗಲಿಲ್ಲ! ತಲೆಗೆ ಸ್ನಾನ ಮಾಡಬೇಡ ಎಂದು ಎಷ್ಟು 
ಹೇಳಿದರೂ ಕೇಳದೆ ಗಾಯದ ಹೊಲಿಗೆ ಬಿಚ್ಚಿದ ಮರುದಿನವೇ ನಮಗ್ಯಾರಿಗೂ ತಿಳಿಯದಂತೆ ತಲೆಗೆ
ನೀರು ಹಾಕಿಕೊಂಡೇ ಬಿಟ್ಟರು! ಇನ್ನು ಸುಮ್ಮನೆ ಕೂರುವ ಜಾಯಮಾನವಂತೂ ಅಲ್ಲವೇ ಅಲ್ಲ!
 ಅಲ್ಲಿ ಇಲ್ಲಿ ಓಡಾಡುತ್ತಾ, ಒಂದೇ ಕೈಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡುತ್ತಾ ಇರುತ್ತಾಳೆ. ಸುಮ್ಮನೆ
ಮಲಗಿಯೋ, ಕುಳಿತೋ ಇರು ಅಂದ್ರೆ ಕೇಳುವುದೇ ಇಲ್ಲ. ಹಗಲು ರಾತ್ರಿಯೆನ್ನದೆ ಸಂಸಾರಕ್ಕಾಗಿ ದುಡಿದ
 ಜೀವ ಒಂದು ಗಳಿಗೆ ಕೂರುವುದೆಂದರೆ ಹಿಂಸೆ ಪಡುತ್ತದೆ. ಅಂತೂ ಗುಣವಾಗುವ ಹಂತದಲ್ಲಿದ್ದಾರೆ.
ನಂಬಿದ ದೇವರು ಖಂಡಿತ ಕೈ ಬಿಡುವುದಿಲ್ಲ ಎಂಬ ನಂಬಿಕೆಯಿಂದ ದೇವರ ಮೇಲೆ ಭಾರ ಹಾಕಿ
ಬಂದಿದ್ದೇನೆ.


       ನಿಮ್ಮೆಲ್ಲರ ಬ್ಲಾಗ್ ಕಡೆ ಮುಖ ಹಾಕಿ ತುಂಬಾ ದಿನಗಳಾದವು. ಈಗ ಖಂಡಿತಾ ನಿಮ್ಮ
 ಮನೆಗೆ ಬರುತ್ತೇನೆ. ಸಾಹಿತ್ಯದ ಭೋಜನವನು ಉಣ್ಣುತ್ತೇನೆ. ನಿಮ್ಮ ಸಲಹೆಗಳ ರೂಮಿನಲ್ಲಿ 
ಉಳಿಯುತ್ತೇನೆ. 


     ನಿಮ್ಮವ
       ಪ್ರವೀಣ್ (ಮನದಾಳದಿಂದ) 

Wednesday, April 7, 2010

ಅಮ್ಮಾ

ಗೆಳೆಯರೇ, ಸೋಮವಾರ ನನ್ನ ತಮ್ಮ ಮತ್ತು ಅಮ್ಮ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಅಪಘಾತವಾಗಿತ್ತು. ಅಮ್ಮನಿಗೆ ಕೈ ಮೂಳೆ ಮುರಿದಿದ್ದು, ತಲೆಗೆ ಹೊಡೆತ ಬಿದ್ದು ೮ ಹೊಲಿಗೆ ಹಾಕಲಾಗಿದೆ. ದೇವರ ದಯೆಯಿಂದ ಹೆಚ್ಚೇನೂ ತೊಂದರೆಯಿಲ್ಲ ಎಂದು ವೈದ್ಯರು  ಹೇಳಿದ್ದಾರೆ. ಇಂದು ಬೆಳಿಗ್ಗೆ ಪ್ರಜ್ಞೆ ಬಂದು, ನನ್ನೊಂದಿಗೆ ಮಾತನಾಡಿದಾಗಲೇ ನನಗೆ ಹೋದ ಜೀವ ಬಂದಿದ್ದು! ಅಮ್ಮ ಈಗ ನಿದಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯ ಪ್ರದೀಪನಿಗೆ (ತಮ್ಮ) ಯಾವುದೇ ತೊಂದರೆಗಲಾಗಲಿಲ್ಲ.

 ಈ ಸಮಯದಲ್ಲಿ ಅಮ್ಮನ ನೆನಪಾಗಿ ಹರಿದ ಕಣ್ಣೀರಿಗೆ ಬರಹದ ರೂಪ ಕೊಟ್ಟಿದ್ದೇನಷ್ಟೇ. ನನ್ನ ಸಹೃದಯಿ ಬ್ಲಾಗ್ ಸ್ನೇಹಿತರು ಒಳ್ಳೆ ಮನಸಿನಿಂದ ಹರಸಿದರೆ ಸಾಕು, ನನ್ನಮ್ಮ ಬೇಗ ಗುಣವಾಗುತ್ತಾಳೆಂಬ ಆಸೆಯಿಂದ ನೋವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. 






ಅಮ್ಮಾ.................,
ನಿನ್ನ ಕೈ ತುತ್ತಿಗಾಗಿ ಮನ ಕಾಡಿದೆ.........
ನಿನ್ನ ಕಾಲಮೇಲೆ ಮಲಗುವ ಆಸೆ.........
ಪದೇ ಪದೇ ಮೂಡುತಿದೆ...............
ತಲೆಗೊಂದು ಬ್ಯಾಂಡೇಜು.............
ಕೈಗೊಂದು ಪ್ಲಾಸ್ಟರು.................
ಆಸ್ಪತ್ರೆಯ  ಹಾಸಿಗೆಯಲಿ............... 
ಇದೇನು ನಿನ್ನ ಕಾರುಬಾರು............?
ಅಯ್ಯೋ,
ಇದೇಕಮ್ಮಾ ಹೀಗಾಯ್ತು...........? 
ಹಾಸಿಗೆ ಹಿಡಿಯುವ ಗತಿ ನಿನಗಾಯ್ತು.......
ನಾ ನೋಡಲಾರೆ ನಿನ್ನೀ ಸ್ಥಿತಿಯ........
ಹಠ ಮಾಡಲಾರೆ, ರಚ್ಚೆ ಹಿಡಿಯಲಾರೆ.........
ನೀ ಹೇಳಿದಂತೆ ಕೇಳುವೆ ....
ಒಮ್ಮೆ ನನ್ನೊಂದಿಗೆ ಮಾತಾಡಬಾರದೆ......? 

ನಸುಕಿನಲಿ ನೀನೆದ್ದು..........
ಅಂಗಳ ಕಂಗಳವ  ಸಾರಿಸಿ..........
ಬಿಸಿಬಿಸಿ ಕಾಫಿ ತಂದು..........
ಏಳು ಮಗನೆ ಎನ್ನುವರಿಲ್ಲ.........
ಇತ್ತಲ್ಲೇ ಕಾಫಿ ತಣ್ಣಗಾದಾಗ............
ಮುಸುಕೆಳೆದು ಹಣೆಗೆ ಮುತ್ತಿಟ್ಟು.........
ತಲೆಗೂದಳಲಿ ಕೈಯಾಡಿಸುತ........ 
ಹೊತ್ತಾಯ್ತು ಮಗನೆ ಎನ್ನುವರಿಲ್ಲ..........

ಸಾಕಮ್ಮ ಇನ್ನು ನೀ ದುಡಿದೆ ...............
ಜೀವ ತೆಯ್ದೆ ನಮಗಾಗಿ............
ಇನ್ನು ಸಾಕು ನೀಡು ನಮಗೆ..........
ನಿನ್ನ ಸೇವೆಗಯ್ಯುವ ಪುಣ್ಯವ.........
ಬೇಗ ಗುಣವಾಗಿ ಗಾಯ ಮಾಯವಾಗಿ..........
ಮೊದಲಿನಂತೆ ನೀ ಪಗಡೆಯಾಡಲು..........
ನನ್ನೊಂದಿಗೆ ಜಗಳವಾಡಲು.................
ನಿನ ಸೇವೆ ಮಾಡುವ ಈ ನಿನ್ನ ಕಂದ..........
ಓ ದೇವರೇ ನನ್ನಮ್ಮ ಒಬ್ಬಳೇ...........
ಗುಣವಾಗಿಸು ಬೇಗ ಮೊದಲಿನಂತೆ...........

 ನಿನಗೂ ಅಮ್ಮನಿಲ್ಲವೇ.................
ಅಮ್ಮನ ನೋವು ನನದಲ್ಲವೇ...........
ಕರುಣಿಸಬಾರದೆ ಓ ಕರುಣಾಮಯಿ............
ತರತರದ ಪುಷ್ಪಗಳಿಂದ.............
ಚಂದನ ಸಾಂಬ್ರಾಣಿ ಕರ್ಪೂರದಿಂದ............
ನಿನಗೆ ಹರಕೆ ನೀಡುವೆ................
ನನ್ನಮ್ಮನಿಗೆ ನೋವು ಕೊಡದೆ...........
ಔಷದಗಳೇ ಅಮೃತವಾಗಿ.................
ಬೇಗ ಬರಲಿ ಅಮ್ಮ ಮನೆಗೆ.................

Thursday, April 1, 2010

ಕಾಡುವುದೇತಕೆ?













ಅಂದೆಂದೋ ನನ್ನವಳಾಗಿದ್ದ ನೀನು

ಇಂದು ಕನಸಿನಲ್ಲಿ ಬಂದಿದ್ದೇಕೆ........?

ಮನಸಿನಾಳದಿಂದ ಕಿತ್ತೋಗೆದ ಮೇಲೂ

ನೆನಪಾಗಿ ನೀ ಕಾಡುವುದೇಕೆ........?



ಪ್ರೀತಿಯ ಹೊಳೆ ಹರಿಸಿದ್ದೆ ಅಂದು

ನಿನ್ನೊಲುಮೆಯ ಪರಿಗೆ ನಾ ಸೋತಿದ್ದೆ.........,

ಬಣ್ಣದ ಮಾತುಗಾರನ ಮೋಡಿಗೆ

ಸೋತು ನನ್ನ ದೂರ ಏಕೆ ತಳ್ಳಿದ್ದೆ.............!



ಕಾಡಿದೆ ಬೇಡಿದೆ ಅಂಗಲಾಚಿದೇ  

ಆದರೂ ನೀನು ಮಣಿಯಲಿಲ್ಲವಲ್ಲಾ.............,

ಹೆಣ್ಣೇ ನಿನಗೇಕೆ ಬಂತು ಈ ದುರ್ಬುದ್ಧಿ

ಪ್ರೀತಿಸಿ ನಂಬಿಸಿ ಕೈ ಕೊಟ್ಟೆಯಲ್ಲಾ...........!



ಹರಸಿದ್ದೆನಲ್ಲ ಚನ್ನಾಗಿರೆಂದು ದೂರದಿಂದ

ನಿನ್ನ ಮದುವೆಯ ಸುದ್ಧಿ ತಿಳಿದಾಗ.............

ತಡೆಯಲಾರದೆ ಹೋದೆ ನಿನ್ನ ನೆನಪುಗಳ

ಕಣ್ಣೀರು ಹರಿಸಿದ್ದೆ ನೀ ಬಿಟ್ಟು ಹೊರಟಾಗ......



ಬೇಡ ಬೇಡವೆಂದರೂ ನೆನಪಾಗುವೆಯಲ್ಲ

ಮನಸಿಗೆ ಹೇಗೆ ಹಾಕಲಿ ಕಡಿವಾಣ.......?

ನೆಮ್ಮದಿ ಇಲ್ಲವಾಗಿದೆ ಜೀವಕೆ

ಎಂದಿಗೂ ಇಲ್ಲವೇ ನೆನಪುಗಳಿಗೆ ಮರಣ........?