ಸಾಸಿರಾರು ನೆನಪುಗಳನ್ನು ಹೊತ್ತು ಊರಿನಿಂದ ಮರಳಿ ಬಂದು ಹಲವು ದಿನಗಳೇ ಕಳೆದು ಹೋದವು. ದುಡಿಮೆಯ ನಿರಂತರ ಓಟದಲ್ಲಿ ಸುಂದರ ಕ್ಷಣಗಳಿಗಾಗಿ ಹುಡುಕಾಟ ನಡೆದೇ ಇದೆ. ಆದರೂ ನೆನಪುಗಳು ಆಗೊಮ್ಮೆ ಈಗೊಮ್ಮೆ ಇಣುಕಿ ಹೋಗುತ್ತವೆ. ನೆನಪುಗಳ ಹರಿವಿನ ನಡುವೆ ಜೀವನಕ್ಕಾಗಿ ಪರದಾಟ ಇದ್ದೇ ಇದೆ.
ಮಲೆನಾಡು ಎಂದರೆ ಸುಂದರ ಪ್ರಕೃತಿಯ ಬೀಡು. ದೇವರು ತನ್ನ ಶಕ್ತಿಯನ್ನೆಲ್ಲಾ ಸೌಂದರ್ಯದ ರೂಪದಲ್ಲಿ ಮಲೆನಾಡಿಗೇ ರವಾನಿಸಿರಬಹುದೇನೊ ಎಂಬ ಅನುಮಾನ ಬರುವುದು ಸಹಜ. ಸದಾ ಕಾಲವೂ ಹಸಿರಾಗಿ ಸುಂದರವಾಗಿ, ತಂಪಾಗಿ, ಸಮಾನ ಉಷ್ಣಾಂಶದಿಂದ ನಳನಳಿಸೊ ಸೌಂದರ್ಯ ರಾಶಿ ನಮ್ಮ ಮಲೆನಾಡು.
ಮಲೆನಾಡಿನ ರೈತರಿಗೆ ವರ್ಷವಿಡೀ ಕೆಲಸವೇ. ಎಂದಿಗೂ ಕೆಲಸ ಇಲ್ಲ ಎಂಬ ದಿನವೇ ಇಲ್ಲ. ಜೂನ್ ತಿಂಗಳಿನಿಂದ ಶುರು ಆಗುವ ಕೆಲಸಗಳು ಮೇ ಅಂತದ ವರೆಗೂ ಇರುತ್ತವೆ. ಭತ್ತದ ನಾಟಿಯ ಕೆಲಸ, ತೋಟದ ಕಳೆ, ಅಡಕೆಯ ಔಷದಿ, ಗದ್ದೆ ಕೊಯ್ಲು, ಅಡಕೆ ಸುಲಿತ, ಎರಡನೆ ಬೆಳೆಯಾಗಿ ಮತ್ತೆ ಭತ್ತ, ಹುರುಳಿ, ಎಳ್ಳು, ಹೆಸರು, ಉದ್ದಿನಂತ ಬೇಳೆಕಾಳುಗಳು, ಬೇಸಿಗೆಯಲ್ಲಿ ಸೌತೆ, ಬದನೆ, ಕುಂಬಳ, ಮೆಣಸು, ಬೆಂಡೆ ಮುಂತಾದ ತರಕಾರಿಗಳ ಹಿತ್ತಿಲು, ಮಳೆಗಾಲಕ್ಕೆ ಕಟ್ಟಿಗೆಯ ಸಂಗ್ರಹ.............ಹೀಗೆ ನಿರಂತರ ಕೆಲಸಕಾರ್ಯಗಳೇ!
ಇಂತಹ ಕೆಲಸಗಳಲ್ಲೇ ಭತ್ತದ ನಾಟಿ(ನಟ್ಟಿ) ಮುಖ್ಯವಾದ ಕೆಲಸ. ಮೊದಲೆಲ್ಲಾ ಮಳೆಯ ಕಣ್ಣುಮುಚ್ಚಾಲೆ ಅಷ್ಟಾಗಿ ಇರಲಿಲ್ಲ. ಅದ್ದರಿಂದ ಮೇ ತಿಂಗಳಲ್ಲೇ ಬೀಜ ಹಾಕಿ ಆಗಿರುತ್ತಿತ್ತು. ಜುಲೈ ಅಂತ್ಯದಲ್ಲಿ ನಟ್ಟಿಯ ಕೆಲಸ ಮುಗಿದಿರುತ್ತಿತ್ತು. ಮಳೆಗಾಲದ ಕಾಲಚಕ್ರ ಬದಲಾದಂತೆ, ನಿಯಮಗಳೂ ಬದಲಾದವು. ಈಗ ಮಳೆ ಶುರು ಆದ ನಂತರವೇ ಬೀಜ ಹಾಕುತ್ತಾರೆ. ಹಾಗಾಗಿ ಸೆಪ್ಟೆಂಬರ್ ಬಂದರೂ ನಟ್ಟಿ ಮುಗಿದಿರುವುದಿಲ್ಲ!
ಬೀಜ ಹಾಕಿ ತಿಂಗಳು ಕಳೆಯುವಷ್ಟರಲ್ಲಿ ಸಸಿ ಬೆಳೆದು ನಾಟಿಯ ಹಂತಕ್ಕೆ ಬರುತ್ತದೆ. ಅಷ್ಟರಲ್ಲಾಗಲೇ ಗದ್ದೆ ಉಳುಮೆ ಮಾಡಿ ಹದಗೊಳಿಸಿರಲಾಗುತ್ತದೆ. ಮೂರರಿಂದ ನಾಲ್ಕು ಸಾಲು ಹೂಟೆ ಮುಗಿದಿರುತ್ತದೆ. ಆಮೇಲೆ ಶುರು ಆಗುವುದೇ ನಿಜವಾದ ನಟ್ಟಿಯ ಚಿತ್ರಣ! ಗದ್ದೆಯಲ್ಲಿ ಎಲ್ಲಿ ನೋಡಿದರೂ ಗೊರಬು, ಕಂಬಳಿ ಕೊಪ್ಪೆ, ಎತ್ತು ಕೋಣಗಳು.....!ಜನರಲ್ಲಿ ಏನೋ ಉತ್ಸಾಹ, ಇಡೀ ವರ್ಷದ ಅನ್ನಕ್ಕಾಗಿ ಬೆವರಿಳಿಸುವ ತವಕ!
ಈಗ ಕೂಲಿಕಾರ್ಮಿಕರ ಸಮಸ್ಯೆ ನಮಗಿಲ್ಲ. ಏಕೆಂದರೆ ನಮ್ಮಲ್ಲಿ ಕೂಲಿಗಳೇ ಇಲ್ಲ! ಅನಿಯಮಿತ ಸಹಕಾರ ಪದ್ಧತಿ ನಮ್ಮ ಮಲೆನಾಡಿನಲ್ಲಿದೆ. ಅದಂರತೆ ಊರಲ್ಲಿ ಕೆಲವಷ್ಟು ಮನೆಯವರೆಲ್ಲಾ ಸೇರಿ ಒಟ್ಟಾಗಿ ಕೆಲಸಕಾರ್ಯಗಳನ್ನು ಮಾಡಿಕೊಳ್ಳುತ್ತಾರೆ. ಅವರ ಕೆಲಸಕ್ಕೆ ನಾವು ಹೋಗುವುದು, ನಮ್ಮ ಕೆಲಸಕ್ಕೆ ಅವರು ಬರುವುದು. ಮಲೆನಾಡಿನಲ್ಲಿ ಪರಸ್ಪರ ಮನೆಗಳ ಅಂತರ ಬಹಳ ದೂರ. ಒಂದು ಕಿಲೋಮೀಟರ್ ಅಂತರದಲ್ಲಿ ಎರಡು ಅಥವಾ ಮೂರು ಮನೆಗಳು ಸಿಗಬಹುದು. ಹಾಗಾಗಿ ಆದಷ್ಟು ಹತ್ತಿರದ ಮನೆಗಳ ಜನರು ಒಂದಾಗಿ ಕೆಲಸ ಮಾಡುತ್ತಾರೆ. ಯಾವುದೇ ಕೆಲಸವಾದರೂ ಸೈ, ಎಲ್ಲರೂ ಒಟ್ಟಾಗಿ ಕೆಲಸ ಮುಗಿಸುತ್ತಾರೆ.
ಈಗೀಗ ಇನ್ನೊಂದು ಸಮಸ್ಯೆ ಎಲ್ಲಾ ಹಳ್ಳಿ ರೈತರಿಗೂ ತಲೆದೋರುತ್ತಿದೆ. ಅದೇನೆಂದರೆ ನಮ್ಮಂತ ಯುವ ಪೀಳಿಗೆಯ ನಗರ ಪಲಾಯನ ಸೂತ್ರ! ನಾಲ್ಕಕ್ಷರ ಕಲಿತ ಕೋಡು ಮೂಡಿ ನಾವು ನಗರಕ್ಕೆ ಪಲಾಯನ ಮಾಡುತ್ತಿದ್ದೇವೆ. ಕಾರಣ ಹಳ್ಳಿಯಲ್ಲಿ ಭವಿಷ್ಯ ಇಲ್ಲ ಎಂಬ ದೂರು. ರೈತ ಕೆಲಸಕ್ಕೆ ಯಾರೂ ಇಲ್ಲ. ಕೆಲವಷ್ಟು ಕಾರ್ಯಗಳನ್ನು ಯಂತ್ರಗಳು ನಿರ್ವಹಿಸಬಲ್ಲವು. ಆದರೆ ಸಂಪೂರ್ಣ ಕೆಲಸಗಳನಲ್ಲ!
ಇರಲಿ, ವಿಷಯಕ್ಕೆ ಬರೋಣ!
ನಟ್ಟಿಯ ಮೊದಲ ದಿನ ಸಸಿ ಕೀಳುವ ಕಾರ್ಯ. ಕಿತ್ತ ಸಸಿಯನ್ನು ಕಟ್ಟು ಮಾಡಿ ಇಡುವುದು. ಹೀಗೆ ಒಬ್ಬ ಹೆಂಗಸು ಒಂದು ದಿನದಲ್ಲಿ ಕೀಳುವ ಸಸಿ ಕಟ್ಟಿನ ಸಂಖ್ಯೆ ಸುಮಾರು 9 ರಿಂದ 11 ಮೆದೆ(ಒಂದು ಮೆದೆ ಎಂದರೆ ಇಪ್ಪತ್ತು ಕಟ್ಟು). ಸಾದಾರಣವಾಗಿ ಹೆಂಗಸರೇ ಸಸಿ ಕೀಳುವುದು ಹೆಚ್ಚು! ಕಿತ್ತ ಸಸಿಗಳನ್ನು ನೀರಿಂದ ಮೇಲೆ ಎತ್ತಿಡುವುದು , ಹಾಗೆ ಎತ್ತಿಟ್ಟ ಸಸಿ ಕಟ್ಟಿನ ನೀರು ಇಳಿದ ಮೇಲೆ ಹೆಡಗೆ(ಬುಟ್ಟಿ)ಯಲ್ಲೋ, ಹಗ್ಗ ಕಟ್ಟಿಯೋ ನೆಡುವ ಜಾಗಕ್ಕೆ ಕೊಂಡೊಯ್ದು ಹಾಕುವುದು ಗಂಡಸರ ಕೆಲಸ! ಇದಿಷ್ಟು ಮೊದಲ ದಿನದ ಚಿತ್ರಣ.
ನಾಟಿಯ ದಿನ ಹೂಟೆ ಮುಂಚಿತವಾಗಿ ಆರಂಭವಾಗುತ್ತದೆ. ಎತ್ತು/ಕೋಣಗಳ ಜೋಡಿ ಸಾಲು ಹೂಟೆಯಲ್ಲಿ ಕಂಡುಬರುತ್ತವೆ. ನಾಟಿ ಮಾಡಲು ಇರುವ ಜನರ ಸಂಖ್ಯೆಯ ಮೇಲೆ ಎಷ್ಟು ಜೋಡಿ ಎತ್ತುಗಳು ಬೇಕೆಂಬುದನ್ನು ನಿರ್ಧರಿಸುತ್ತದೆ. ಉದಾಹರಣೆಗೆ ೧೨ರಿಂದ ೧೫ ಜನರಿಗೆ ೪ರಿಂದ ೫ ಜೋಡು ಬೇಕಾಗುತ್ತದೆ.(ಹೂಟೆಯ ಜೋಡಿ ಎತ್ತು/ಕೋಣಗಳಿಗೆ ಜೋಡು ಎಂದು ಕರೆಯುತ್ತಾರೆ.) ಹೂಟೆಯು ಮುಂದುವರೆದಂತೆ ನಟ್ಟಿ ಶುರು ಆಗುತ್ತದೆ. ನಳ್ಳಿ ಹೊಡೆದು ಸಮತಟ್ಟಾದ ನಂತರ ಸಸಿ ಕಟ್ಟಿನ ತಲೆಭಾಗ ಸ್ವಲ್ಪ ಕೊಯ್ದು ಗದ್ದೆಗೆ ಎಸೆಯಲಾಗುತ್ತದೆ. ಆ ಕಟ್ಟುಗಳನ್ನು ಬಿಚ್ಚಿ ೩-೫ ಸಸಿಗಳನ್ನು ಒಟ್ಟೊಟ್ಟಿಗೆ ನೆಡುತ್ತಾರೆ.
ಈಗಲೂ ಕೂಡಾ ನಮ್ಮಲ್ಲಿ ನಟ್ಟಿ, ಗದ್ದೆಕೊಯ್ಲಿನ ಸಂದರ್ಭದಲ್ಲಿ ಹೆಂಗಸರು ಹಾಡು ಹೇಳುತ್ತಾರೆ. ಆದರೆ ವ್ಯತ್ಯಾಸ ಇಷ್ಟೆ. ಹಿಂದೆ ಜನಪದ ಗೀತೆಗಳ ಸೊಗಡು ತುಂಬಿದ್ದರೆ ಈಗ ಚಲನಚಿತ್ರ ಗೀತೆಗಳು. ಆಗೊಮ್ಮೆ ಈಗೊಮ್ಮೆ ಹಳೆಯ ತಲೆಗಳಿಂದ ಜಾನಪದ ಗೀತೆಗಳೂ ಕೇಳಿ ಬರುವುದುಂಟು. ಆದರೆ ತುಂಬಾ ಕಡಿಮೆ. ಈಗಿನ ಹೆಣ್ಣುಮಕ್ಕಳು ಹಳಬರ ಪ್ರತಿಭೆಗೆ ಪ್ರೋತ್ಸಾಹ ಕೊಟ್ಟು ಬೆಳೆಸಿಕೊಳ್ಳದೆ ತಿರಸ್ಕಾರ ಮಾಡಿದ್ದು ನಾನು ಕಣ್ಣಾರೆ ಕಂಡ ಸತ್ಯ! ಆದರೂ ಒಂದು ತೃಪ್ತಿ ಎಂದರೆ ಎಲ್ಲವೂ ಕನ್ನಡ ಹಾಡುಗಳೇ ಎಂಬುದು. ಮುಂದೊಂದು ದಿನ ಆ ಸ್ಥಾನವನ್ನು ಹಿಂದಿಯ ಹಾಡುಗಳೋ, ಅಥವಾ ತಮಿಳು ತೆಲುಗಿನ ಹಾಡುಗಳು ಆಕ್ರಮಿಸಿಕೊಂಡರೆ ಆಶ್ಚರ್ಯವೇನಿಲ್ಲ! ಬದಲಾವಣೆ ಪ್ರಕೃತಿಯ ನಿಯಮ.......
ನಟ್ಟಿಯ ಸಂದರ್ಭದಲ್ಲಿ ಊಟ ತಿಂಡಿಗಳು ಗದ್ದೆಯಲ್ಲಿಯೇ ನದೆಯುತ್ತವೆ. ಸಾಧಾರಣವಾಗಿ ತಿಂಡಿಯೆ ಹೆಚ್ಚು. ಬೆಳಿಗ್ಗೆ ಊಟ ಮಾಡುವ ಪದ್ಧತಿಯನ್ನು ನಮ್ಮೂರಲ್ಲಿ ನೋಡಬಹುದು. ಕುಚ್ಚಲಕ್ಕಿಯ ಗಂಜಿ ಈಗ ಅಲ್ಲಲ್ಲಿ ಮರೆಯಾಗಿದೆ. ಮೊದಲೆಲ್ಲಾ ಬೆಳಿಗ್ಗೆ ಕಂಚಿನ ಬಟ್ಟಲಲ್ಲಿ ಎರಡುಬಟ್ಟಲು ಗಂಜಿ ಉಂಡು ಗದ್ದೆಗೆ ಹೋಗುತ್ತಿದ್ದರು. ಈಗ ಕುಚ್ಚಲಕ್ಕಿ ಊಟ ಕಡಮೆಯಾಗಿದೆ. ಬೆಳಗ್ಗಿನ ಊಟದ ಪದ್ದತಿ ಇದೆ. ಗದ್ದೆಗೆ ಮಧ್ಯಾಹ್ನ ಕಡುಬು ತಿಂಡಿಯ ರೂಪದಲ್ಲಿ ತರಲಾಗುತ್ತದೆ. ಕಡುಬು ಸಕಲರಿಗೂ ಮೆಚ್ಚು, ಮಾಡುವುದೂ ಸುಲಭ. ಏನಾದರೂ ಒಂದು ಸಾರು ಮಾಡಿದರೆ ಆಯ್ತು. ಹೆಚ್ಚು ಕಷ್ಟವೇ ಇಲ್ಲ.
ಬಿಸಿ ಬಿಸಿ ಕಾಫಿಯ ಸೇವೆ ಮಧ್ಯ ಒಂದೆರೆಡು ಬಾರಿ ಇರುತ್ದೆ. ಆಗಾಗ ಎಲೆ ಅಡಿಕೆಯಂತೂ ಇದ್ದೇ ಇರುತ್ತದೆ. ಬಿರುಮಳೆಯಿಂದ ಉಂಟಾದ ಚಳಿಯ ರಕ್ಷಣೆಗೆ ಎಲೆ ಅಡಿಕೆ ಸರ್ವೋಚ್ಛ ಸಾಧನ. ಎಳೆಯರಿಂದ ಮುದುಕರವರೆಗೂ ಎಲ್ಲರೂ ಎಲೆ ಅಡಿಕೆಯ ದಾಸಾನುದಾಸರೇ!
ಅದೇ ಮೊದಲ ದಿನದ ನಟ್ಟಿಯಾದರೆ "ದೊಡ್ನಟ್ಟಿ" ಎಂದು ಕರೆಸಿಕೊಳ್ಳುತ್ತದೆ. ಸಂಜೆ ನಟ್ಟಿ ಮುಗಿದ ನಂತರ ಗದ್ದೆ ಮಧ್ಯೆ ಮುಂಡುಗವನ್ನು ನೆಟ್ಟು ಹಲಸಿನ ಹಣ್ಣನ್ನು ಕಡಿದು ಎಲ್ಲರಿಗೂ ಹಂಚಲೇ ಬೇಕು. ಆ ದಿನ ಹಲಸಿನ ಹಣ್ಣಂತೂ ಇರಲೇಬೇಕು!
ಅಂತೂ ನಟ್ಟಿಯನ್ನು ಮುಗಿಸಿ, ಜೋಪಾನವಾಗಿ ನೋಡಿಕೊಂಡು ಬರಲಾಗುತ್ತದೆ. ಹತ್ತರಿಂದ ಹದಿನೈದು ದಿನಗಳಲ್ಲೆ ಹೊಸ ಚಿಗುರು ಬರಲಾರಂಭಿಸುತ್ತದೆ. ಎರೆಡು ತಿಂಗಳು ಕಳೆಯುವಷ್ಟರಲ್ಲಿ ತನೆಗಳು ಮೂಡಲಾರಂಭಿಸುತ್ತವೆ.
ಮಧ್ಯದಲ್ಲಿ ಎಲ್ಲಾದರೂ ಮಳೆ ಕೈ ಕೊಟ್ಟು ಹೆಚ್ಚೊ ಕಡಿಮೆಯೋ ಆದರೆ ಮುಗಿಯಿತು. ರೈತ ರಕ್ತದಂತೆ ಇಳಿಸಿದ ಬೆವರಿಗೆ ಕವಡೆ ಕಿಮ್ಮತ್ತೂ ಇಲ್ಲದಂತಾಗುತ್ತದೆ. ಪಟ್ಟ ಕಷ್ಟಕ್ಕೆ ಬೆಲೆಯೆ ಇಲ್ಲವಾಗುತ್ತದೆ. ಆದರೂ ದೇಶದ ಬೆನ್ನೆಲುಬಾಗಿ ರೈತ ನಾಳೆಯ ಭರವಸೆಯೊಂದಿಗೆ ಬದುಕುತ್ತಾನೆ. ಈ ವರ್ಷ ಏನೂ ತೊಂದರೆ ಆಗಲಾರದು ಎಂಬ ನಂಬಿಕೆ ತುಂಬಿರುತ್ತದೆ. ಚೌಡಿಗೆ ಕೊಡುವ ಹರಕೆಯಲ್ಲಿ ಒಂದು ಸಂಖ್ಯೆ ಹೆಚ್ಚಾಗುತ್ತದೆ. ಕಾಕತಾಳೀಯವೋ ಎಂಬಂತೆ ಅತೀ ಹೆಚ್ಚಲ್ಲದಿದ್ದರೂ ತೊಂದರೆಯಿಲ್ಲದೆ ಈ ವರ್ಷ ಕೆಲಸ ಕಾರ್ಯಗಳು ಮುಗಿದು ಬೆಳೆ ಕೈಗೆ ಸಗುತ್ತದೆ. ಚೌಡಿಗೆ ಒಂದು ಜಾಸ್ತಿ ಕೊಟ್ಟಿದ್ದು ವ್ಯರ್ಥವಾಗಲಿಲ್ಲ ಎಂಬ ಸಂತೋಷ ರೈತನ ಮೊಗದಲ್ಲಿ ನಲಿದಾಡುತ್ತದೆ.
ನಮ್ಮ ಮನೆಯ ನಟ್ಟಿಯ ಸಮಯದ ಕೆಲವು ಚತ್ರಗಳು ಇಲ್ಲಿ ನಿಮಗಾಗಿ, ನೊಡಿ.........
ನಳ್ಳಿ ಹೊಡೆಯುತ್ತಿರುವ ನನ್ನ ತಮ್ಮ (ನಳ್ಳಿ ಎಂದರ ಹೂಟೆ ಮಾಡಿದ ಭೂಮಿಯ ಉಬ್ಬುತಗ್ಗುಗಳನ್ನು ಮುಚ್ಚಲು ಬಳಸುವ ಸಾಧನ)
ಸಸಿ ಕೀಳುತ್ತಿರುವ ನಮ್ಮೂರ ಮಹಿಳೆಯರು
ಎತ್ತು ಮತ್ತು ಕೋಣಗಳು ವಿಶ್ರಾಂತಿಯಲ್ಲಿ.
ನೆಗಿಲ ಯೋಗಿ........
ಸೀನಣ್ಣ ಮತ್ತು ನಮ್ಮ ಚಿಕ್ಕಪ್ಪ ಹೂಟೆಯಲ್ಲಿ ನಿರತ....
ನೀವು ಎಲೆ ಅಡಿಕೆ ತಿನ್ನಿ, ನಾವು ಹಾಗೆ ಸ್ವಲ್ಪಹೊತ್ತು ಕೆಸರಲ್ಲಿ ಮಲಗಿ ವಿಶ್ರಮಿಸುತ್ತೇವೆ ಎನ್ನುವ ಕೋಣಗಳು
ಇರಿ ಬಂದೆ, ತಮ್ಮ ಒಬ್ನೆ ಹೂಡ್ತಾ ಇದ್ದಾನೆ, ನಾನು ಸ್ವಲ್ಪ ಹೊತ್ತು ನಳ್ಳಿ ಹೊಡಿತೀನಿ
![]() | ||||||||||||||||||||||||||||||||||||||||||
| ನಾನೂ ಕೆಲ್ಸ ಮಾಡ್ತಾ ಇದ್ನಪ್ಪಾ....... |
![]() | ||||||||||||||||||||||||||||||||||||||||
| ತಿಂಡಿ, ಎಲೆಅಡಿಕೆ ಎಲ್ಲ ಗದ್ದೆಯಲ್ಲೇ.....! |


