Sunday, September 26, 2010

ಭತ್ತದ ನಾಟಿ(ನಟ್ಟಿ)



             ಸಾಸಿರಾರು ನೆನಪುಗಳನ್ನು ಹೊತ್ತು ಊರಿನಿಂದ ಮರಳಿ ಬಂದು ಹಲವು ದಿನಗಳೇ ಕಳೆದು ಹೋದವು. ದುಡಿಮೆಯ ನಿರಂತರ ಓಟದಲ್ಲಿ ಸುಂದರ ಕ್ಷಣಗಳಿಗಾಗಿ ಹುಡುಕಾಟ ನಡೆದೇ ಇದೆ. ಆದರೂ ನೆನಪುಗಳು ಆಗೊಮ್ಮೆ ಈಗೊಮ್ಮೆ ಇಣುಕಿ ಹೋಗುತ್ತವೆ. ನೆನಪುಗಳ ಹರಿವಿನ ನಡುವೆ ಜೀವನಕ್ಕಾಗಿ ಪರದಾಟ ಇದ್ದೇ ಇದೆ. 
             ಮಲೆನಾಡು ಎಂದರೆ ಸುಂದರ ಪ್ರಕೃತಿಯ ಬೀಡು. ದೇವರು ತನ್ನ ಶಕ್ತಿಯನ್ನೆಲ್ಲಾ ಸೌಂದರ್ಯದ ರೂಪದಲ್ಲಿ ಮಲೆನಾಡಿಗೇ ರವಾನಿಸಿರಬಹುದೇನೊ ಎಂಬ ಅನುಮಾನ ಬರುವುದು ಸಹಜ. ಸದಾ ಕಾಲವೂ ಹಸಿರಾಗಿ ಸುಂದರವಾಗಿ, ತಂಪಾಗಿ, ಸಮಾನ ಉಷ್ಣಾಂಶದಿಂದ ನಳನಳಿಸೊ ಸೌಂದರ್ಯ ರಾಶಿ ನಮ್ಮ ಮಲೆನಾಡು.
             ಮಲೆನಾಡಿನ ರೈತರಿಗೆ ವರ್ಷವಿಡೀ ಕೆಲಸವೇ. ಎಂದಿಗೂ ಕೆಲಸ ಇಲ್ಲ ಎಂಬ ದಿನವೇ ಇಲ್ಲ. ಜೂನ್ ತಿಂಗಳಿನಿಂದ ಶುರು ಆಗುವ ಕೆಲಸಗಳು ಮೇ ಅಂತದ ವರೆಗೂ ಇರುತ್ತವೆ. ಭತ್ತದ ನಾಟಿಯ ಕೆಲಸ, ತೋಟದ ಕಳೆ, ಅಡಕೆಯ ಔಷದಿ, ಗದ್ದೆ ಕೊಯ್ಲು, ಅಡಕೆ ಸುಲಿತ, ಎರಡನೆ ಬೆಳೆಯಾಗಿ ಮತ್ತೆ ಭತ್ತ, ಹುರುಳಿ, ಎಳ್ಳು, ಹೆಸರು, ಉದ್ದಿನಂತ ಬೇಳೆಕಾಳುಗಳು, ಬೇಸಿಗೆಯಲ್ಲಿ ಸೌತೆ, ಬದನೆ, ಕುಂಬಳ, ಮೆಣಸು, ಬೆಂಡೆ ಮುಂತಾದ ತರಕಾರಿಗಳ ಹಿತ್ತಿಲು, ಮಳೆಗಾಲಕ್ಕೆ ಕಟ್ಟಿಗೆಯ ಸಂಗ್ರಹ.............ಹೀಗೆ ನಿರಂತರ ಕೆಲಸಕಾರ್ಯಗಳೇ!
              ಇಂತಹ ಕೆಲಸಗಳಲ್ಲೇ ಭತ್ತದ ನಾಟಿ(ನಟ್ಟಿ) ಮುಖ್ಯವಾದ ಕೆಲಸ. ಮೊದಲೆಲ್ಲಾ ಮಳೆಯ ಕಣ್ಣುಮುಚ್ಚಾಲೆ ಅಷ್ಟಾಗಿ ಇರಲಿಲ್ಲ. ಅದ್ದರಿಂದ ಮೇ ತಿಂಗಳಲ್ಲೇ ಬೀಜ ಹಾಕಿ ಆಗಿರುತ್ತಿತ್ತು. ಜುಲೈ ಅಂತ್ಯದಲ್ಲಿ ನಟ್ಟಿಯ ಕೆಲಸ ಮುಗಿದಿರುತ್ತಿತ್ತು. ಮಳೆಗಾಲದ ಕಾಲಚಕ್ರ ಬದಲಾದಂತೆ, ನಿಯಮಗಳೂ ಬದಲಾದವು. ಈಗ ಮಳೆ ಶುರು ಆದ ನಂತರವೇ ಬೀಜ ಹಾಕುತ್ತಾರೆ. ಹಾಗಾಗಿ ಸೆಪ್ಟೆಂಬರ್ ಬಂದರೂ ನಟ್ಟಿ ಮುಗಿದಿರುವುದಿಲ್ಲ! 
               ಬೀಜ ಹಾಕಿ ತಿಂಗಳು ಕಳೆಯುವಷ್ಟರಲ್ಲಿ ಸಸಿ ಬೆಳೆದು ನಾಟಿಯ ಹಂತಕ್ಕೆ ಬರುತ್ತದೆ. ಅಷ್ಟರಲ್ಲಾಗಲೇ ಗದ್ದೆ ಉಳುಮೆ ಮಾಡಿ ಹದಗೊಳಿಸಿರಲಾಗುತ್ತದೆ. ಮೂರರಿಂದ ನಾಲ್ಕು ಸಾಲು ಹೂಟೆ ಮುಗಿದಿರುತ್ತದೆ. ಆಮೇಲೆ ಶುರು ಆಗುವುದೇ ನಿಜವಾದ ನಟ್ಟಿಯ ಚಿತ್ರಣ! ಗದ್ದೆಯಲ್ಲಿ ಎಲ್ಲಿ ನೋಡಿದರೂ ಗೊರಬು, ಕಂಬಳಿ ಕೊಪ್ಪೆ, ಎತ್ತು ಕೋಣಗಳು.....!ಜನರಲ್ಲಿ ಏನೋ ಉತ್ಸಾಹ, ಇಡೀ ವರ್ಷದ ಅನ್ನಕ್ಕಾಗಿ ಬೆವರಿಳಿಸುವ ತವಕ! 
               ಈಗ ಕೂಲಿಕಾರ್ಮಿಕರ ಸಮಸ್ಯೆ ನಮಗಿಲ್ಲ. ಏಕೆಂದರೆ ನಮ್ಮಲ್ಲಿ ಕೂಲಿಗಳೇ ಇಲ್ಲ! ಅನಿಯಮಿತ ಸಹಕಾರ ಪದ್ಧತಿ ನಮ್ಮ ಮಲೆನಾಡಿನಲ್ಲಿದೆ. ಅದಂರತೆ ಊರಲ್ಲಿ ಕೆಲವಷ್ಟು ಮನೆಯವರೆಲ್ಲಾ ಸೇರಿ ಒಟ್ಟಾಗಿ ಕೆಲಸಕಾರ್ಯಗಳನ್ನು ಮಾಡಿಕೊಳ್ಳುತ್ತಾರೆ. ಅವರ ಕೆಲಸಕ್ಕೆ ನಾವು ಹೋಗುವುದು, ನಮ್ಮ ಕೆಲಸಕ್ಕೆ ಅವರು ಬರುವುದು. ಮಲೆನಾಡಿನಲ್ಲಿ ಪರಸ್ಪರ ಮನೆಗಳ ಅಂತರ ಬಹಳ ದೂರ. ಒಂದು ಕಿಲೋಮೀಟರ್ ಅಂತರದಲ್ಲಿ ಎರಡು ಅಥವಾ ಮೂರು ಮನೆಗಳು ಸಿಗಬಹುದು. ಹಾಗಾಗಿ ಆದಷ್ಟು ಹತ್ತಿರದ ಮನೆಗಳ ಜನರು ಒಂದಾಗಿ ಕೆಲಸ ಮಾಡುತ್ತಾರೆ. ಯಾವುದೇ ಕೆಲಸವಾದರೂ ಸೈ, ಎಲ್ಲರೂ ಒಟ್ಟಾಗಿ ಕೆಲಸ ಮುಗಿಸುತ್ತಾರೆ.
               ಈಗೀಗ ಇನ್ನೊಂದು ಸಮಸ್ಯೆ ಎಲ್ಲಾ ಹಳ್ಳಿ ರೈತರಿಗೂ ತಲೆದೋರುತ್ತಿದೆ. ಅದೇನೆಂದರೆ ನಮ್ಮಂತ ಯುವ ಪೀಳಿಗೆಯ ನಗರ ಪಲಾಯನ ಸೂತ್ರ! ನಾಲ್ಕಕ್ಷರ ಕಲಿತ ಕೋಡು ಮೂಡಿ ನಾವು ನಗರಕ್ಕೆ ಪಲಾಯನ ಮಾಡುತ್ತಿದ್ದೇವೆ. ಕಾರಣ ಹಳ್ಳಿಯಲ್ಲಿ ಭವಿಷ್ಯ ಇಲ್ಲ ಎಂಬ ದೂರು. ರೈತ ಕೆಲಸಕ್ಕೆ ಯಾರೂ ಇಲ್ಲ. ಕೆಲವಷ್ಟು ಕಾರ್ಯಗಳನ್ನು ಯಂತ್ರಗಳು ನಿರ್ವಹಿಸಬಲ್ಲವು. ಆದರೆ ಸಂಪೂರ್ಣ ಕೆಲಸಗಳನಲ್ಲ!
ಇರಲಿ, ವಿಷಯಕ್ಕೆ ಬರೋಣ!
             ನಟ್ಟಿಯ ಮೊದಲ ದಿನ ಸಸಿ ಕೀಳುವ ಕಾರ್ಯ. ಕಿತ್ತ ಸಸಿಯನ್ನು ಕಟ್ಟು ಮಾಡಿ ಇಡುವುದು. ಹೀಗೆ ಒಬ್ಬ ಹೆಂಗಸು ಒಂದು ದಿನದಲ್ಲಿ ಕೀಳುವ ಸಸಿ ಕಟ್ಟಿನ ಸಂಖ್ಯೆ ಸುಮಾರು 9 ರಿಂದ 11 ಮೆದೆ(ಒಂದು ಮೆದೆ ಎಂದರೆ ಇಪ್ಪತ್ತು ಕಟ್ಟು). ಸಾದಾರಣವಾಗಿ ಹೆಂಗಸರೇ ಸಸಿ ಕೀಳುವುದು ಹೆಚ್ಚು! ಕಿತ್ತ ಸಸಿಗಳನ್ನು ನೀರಿಂದ ಮೇಲೆ ಎತ್ತಿಡುವುದು , ಹಾಗೆ ಎತ್ತಿಟ್ಟ ಸಸಿ ಕಟ್ಟಿನ ನೀರು ಇಳಿದ ಮೇಲೆ ಹೆಡಗೆ(ಬುಟ್ಟಿ)ಯಲ್ಲೋ, ಹಗ್ಗ ಕಟ್ಟಿಯೋ ನೆಡುವ ಜಾಗಕ್ಕೆ ಕೊಂಡೊಯ್ದು ಹಾಕುವುದು ಗಂಡಸರ ಕೆಲಸ! ಇದಿಷ್ಟು ಮೊದಲ ದಿನದ ಚಿತ್ರಣ.
             ನಾಟಿಯ ದಿನ ಹೂಟೆ ಮುಂಚಿತವಾಗಿ ಆರಂಭವಾಗುತ್ತದೆ.  ಎತ್ತು/ಕೋಣಗಳ ಜೋಡಿ ಸಾಲು ಹೂಟೆಯಲ್ಲಿ ಕಂಡುಬರುತ್ತವೆ. ನಾಟಿ ಮಾಡಲು ಇರುವ ಜನರ ಸಂಖ್ಯೆಯ ಮೇಲೆ ಎಷ್ಟು ಜೋಡಿ ಎತ್ತುಗಳು ಬೇಕೆಂಬುದನ್ನು ನಿರ್ಧರಿಸುತ್ತದೆ. ಉದಾಹರಣೆಗೆ ೧೨ರಿಂದ ೧೫ ಜನರಿಗೆ ೪ರಿಂದ ೫ ಜೋಡು ಬೇಕಾಗುತ್ತದೆ.(ಹೂಟೆಯ ಜೋಡಿ ಎತ್ತು/ಕೋಣಗಳಿಗೆ ಜೋಡು ಎಂದು ಕರೆಯುತ್ತಾರೆ.) ಹೂಟೆಯು ಮುಂದುವರೆದಂತೆ ನಟ್ಟಿ ಶುರು ಆಗುತ್ತದೆ. ನಳ್ಳಿ ಹೊಡೆದು ಸಮತಟ್ಟಾದ ನಂತರ ಸಸಿ ಕಟ್ಟಿನ ತಲೆಭಾಗ ಸ್ವಲ್ಪ ಕೊಯ್ದು ಗದ್ದೆಗೆ ಎಸೆಯಲಾಗುತ್ತದೆ. ಆ ಕಟ್ಟುಗಳನ್ನು ಬಿಚ್ಚಿ ೩-೫ ಸಸಿಗಳನ್ನು ಒಟ್ಟೊಟ್ಟಿಗೆ ನೆಡುತ್ತಾರೆ. 
ಈಗಲೂ ಕೂಡಾ ನಮ್ಮಲ್ಲಿ ನಟ್ಟಿ, ಗದ್ದೆಕೊಯ್ಲಿನ ಸಂದರ್ಭದಲ್ಲಿ ಹೆಂಗಸರು ಹಾಡು ಹೇಳುತ್ತಾರೆ. ಆದರೆ ವ್ಯತ್ಯಾಸ ಇಷ್ಟೆ. ಹಿಂದೆ ಜನಪದ ಗೀತೆಗಳ ಸೊಗಡು ತುಂಬಿದ್ದರೆ ಈಗ ಚಲನಚಿತ್ರ ಗೀತೆಗಳು. ಆಗೊಮ್ಮೆ ಈಗೊಮ್ಮೆ ಹಳೆಯ ತಲೆಗಳಿಂದ ಜಾನಪದ ಗೀತೆಗಳೂ ಕೇಳಿ ಬರುವುದುಂಟು. ಆದರೆ ತುಂಬಾ ಕಡಿಮೆ. ಈಗಿನ ಹೆಣ್ಣುಮಕ್ಕಳು ಹಳಬರ ಪ್ರತಿಭೆಗೆ ಪ್ರೋತ್ಸಾಹ ಕೊಟ್ಟು ಬೆಳೆಸಿಕೊಳ್ಳದೆ ತಿರಸ್ಕಾರ ಮಾಡಿದ್ದು ನಾನು ಕಣ್ಣಾರೆ ಕಂಡ ಸತ್ಯ! ಆದರೂ ಒಂದು ತೃಪ್ತಿ ಎಂದರೆ ಎಲ್ಲವೂ ಕನ್ನಡ ಹಾಡುಗಳೇ ಎಂಬುದು. ಮುಂದೊಂದು ದಿನ ಆ ಸ್ಥಾನವನ್ನು ಹಿಂದಿಯ ಹಾಡುಗಳೋ, ಅಥವಾ ತಮಿಳು ತೆಲುಗಿನ ಹಾಡುಗಳು ಆಕ್ರಮಿಸಿಕೊಂಡರೆ ಆಶ್ಚರ್ಯವೇನಿಲ್ಲ! ಬದಲಾವಣೆ ಪ್ರಕೃತಿಯ ನಿಯಮ.......
            ನಟ್ಟಿಯ ಸಂದರ್ಭದಲ್ಲಿ ಊಟ ತಿಂಡಿಗಳು ಗದ್ದೆಯಲ್ಲಿಯೇ ನದೆಯುತ್ತವೆ. ಸಾಧಾರಣವಾಗಿ ತಿಂಡಿಯೆ ಹೆಚ್ಚು. ಬೆಳಿಗ್ಗೆ ಊಟ ಮಾಡುವ ಪದ್ಧತಿಯನ್ನು ನಮ್ಮೂರಲ್ಲಿ ನೋಡಬಹುದು. ಕುಚ್ಚಲಕ್ಕಿಯ ಗಂಜಿ ಈಗ ಅಲ್ಲಲ್ಲಿ ಮರೆಯಾಗಿದೆ. ಮೊದಲೆಲ್ಲಾ ಬೆಳಿಗ್ಗೆ ಕಂಚಿನ ಬಟ್ಟಲಲ್ಲಿ ಎರಡುಬಟ್ಟಲು ಗಂಜಿ ಉಂಡು ಗದ್ದೆಗೆ ಹೋಗುತ್ತಿದ್ದರು. ಈಗ ಕುಚ್ಚಲಕ್ಕಿ ಊಟ ಕಡಮೆಯಾಗಿದೆ. ಬೆಳಗ್ಗಿನ ಊಟದ ಪದ್ದತಿ ಇದೆ. ಗದ್ದೆಗೆ ಮಧ್ಯಾಹ್ನ ಕಡುಬು ತಿಂಡಿಯ ರೂಪದಲ್ಲಿ ತರಲಾಗುತ್ತದೆ. ಕಡುಬು ಸಕಲರಿಗೂ ಮೆಚ್ಚು, ಮಾಡುವುದೂ ಸುಲಭ. ಏನಾದರೂ ಒಂದು ಸಾರು ಮಾಡಿದರೆ ಆಯ್ತು. ಹೆಚ್ಚು ಕಷ್ಟವೇ ಇಲ್ಲ.
ಬಿಸಿ ಬಿಸಿ ಕಾಫಿಯ ಸೇವೆ ಮಧ್ಯ ಒಂದೆರೆಡು ಬಾರಿ ಇರುತ್ದೆ. ಆಗಾಗ ಎಲೆ ಅಡಿಕೆಯಂತೂ ಇದ್ದೇ ಇರುತ್ತದೆ. ಬಿರುಮಳೆಯಿಂದ ಉಂಟಾದ ಚಳಿಯ ರಕ್ಷಣೆಗೆ ಎಲೆ ಅಡಿಕೆ ಸರ್ವೋಚ್ಛ ಸಾಧನ. ಎಳೆಯರಿಂದ ಮುದುಕರವರೆಗೂ ಎಲ್ಲರೂ ಎಲೆ ಅಡಿಕೆಯ ದಾಸಾನುದಾಸರೇ!  
             ಅದೇ ಮೊದಲ ದಿನದ ನಟ್ಟಿಯಾದರೆ "ದೊಡ್ನಟ್ಟಿ" ಎಂದು ಕರೆಸಿಕೊಳ್ಳುತ್ತದೆ. ಸಂಜೆ ನಟ್ಟಿ ಮುಗಿದ ನಂತರ ಗದ್ದೆ ಮಧ್ಯೆ ಮುಂಡುಗವನ್ನು ನೆಟ್ಟು ಹಲಸಿನ ಹಣ್ಣನ್ನು ಕಡಿದು ಎಲ್ಲರಿಗೂ ಹಂಚಲೇ ಬೇಕು. ಆ ದಿನ ಹಲಸಿನ ಹಣ್ಣಂತೂ ಇರಲೇಬೇಕು!
             ಅಂತೂ ನಟ್ಟಿಯನ್ನು ಮುಗಿಸಿ, ಜೋಪಾನವಾಗಿ ನೋಡಿಕೊಂಡು ಬರಲಾಗುತ್ತದೆ. ಹತ್ತರಿಂದ ಹದಿನೈದು ದಿನಗಳಲ್ಲೆ ಹೊಸ ಚಿಗುರು ಬರಲಾರಂಭಿಸುತ್ತದೆ. ಎರೆಡು ತಿಂಗಳು ಕಳೆಯುವಷ್ಟರಲ್ಲಿ ತನೆಗಳು ಮೂಡಲಾರಂಭಿಸುತ್ತವೆ. 
ಮಧ್ಯದಲ್ಲಿ ಎಲ್ಲಾದರೂ ಮಳೆ ಕೈ ಕೊಟ್ಟು ಹೆಚ್ಚೊ  ಕಡಿಮೆಯೋ ಆದರೆ ಮುಗಿಯಿತು. ರೈತ ರಕ್ತದಂತೆ ಇಳಿಸಿದ ಬೆವರಿಗೆ ಕವಡೆ ಕಿಮ್ಮತ್ತೂ ಇಲ್ಲದಂತಾಗುತ್ತದೆ. ಪಟ್ಟ ಕಷ್ಟಕ್ಕೆ ಬೆಲೆಯೆ ಇಲ್ಲವಾಗುತ್ತದೆ. ಆದರೂ ದೇಶದ ಬೆನ್ನೆಲುಬಾಗಿ ರೈತ ನಾಳೆಯ ಭರವಸೆಯೊಂದಿಗೆ ಬದುಕುತ್ತಾನೆ. ಈ ವರ್ಷ ಏನೂ ತೊಂದರೆ ಆಗಲಾರದು ಎಂಬ ನಂಬಿಕೆ ತುಂಬಿರುತ್ತದೆ. ಚೌಡಿಗೆ ಕೊಡುವ ಹರಕೆಯಲ್ಲಿ ಒಂದು ಸಂಖ್ಯೆ ಹೆಚ್ಚಾಗುತ್ತದೆ. ಕಾಕತಾಳೀಯವೋ ಎಂಬಂತೆ ಅತೀ ಹೆಚ್ಚಲ್ಲದಿದ್ದರೂ ತೊಂದರೆಯಿಲ್ಲದೆ ಈ ವರ್ಷ ಕೆಲಸ ಕಾರ್ಯಗಳು ಮುಗಿದು ಬೆಳೆ ಕೈಗೆ ಸಗುತ್ತದೆ. ಚೌಡಿಗೆ ಒಂದು ಜಾಸ್ತಿ ಕೊಟ್ಟಿದ್ದು ವ್ಯರ್ಥವಾಗಲಿಲ್ಲ ಎಂಬ ಸಂತೋಷ ರೈತನ ಮೊಗದಲ್ಲಿ ನಲಿದಾಡುತ್ತದೆ.


ನಮ್ಮ ಮನೆಯ ನಟ್ಟಿಯ ಸಮಯದ ಕೆಲವು ಚತ್ರಗಳು ಇಲ್ಲಿ ನಿಮಗಾಗಿ, ನೊಡಿ.........



ನಳ್ಳಿ ಹೊಡೆಯುತ್ತಿರುವ ನನ್ನ ತಮ್ಮ (ನಳ್ಳಿ ಎಂದರ ಹೂಟೆ ಮಾಡಿದ ಭೂಮಿಯ ಉಬ್ಬುತಗ್ಗುಗಳನ್ನು ಮುಚ್ಚಲು ಬಳಸುವ ಸಾಧನ)




ಸಸಿ ಕೀಳುತ್ತಿರುವ ನಮ್ಮೂರ ಮಹಿಳೆಯರು



ಕಿತ್ತಿಟ್ಟ ಸಸಿ ಕಟ್ಟುಗಳು.


 
ನೀವು ಕಾಫಿ ಕುಡೀರಿ, ನಾನು ಹಾಗೆ ಸ್ವಲ್ಪ ಹುಲ್ಲು ಮೇಯ್ತೇನೆ. ಆಮೇಲೆ ಬರಲು ಆಗಲ್ಲ!




ಅಬ್ಬ....ಎಷ್ತು ತಣ್ಣಗಾಗ್ತ ಇದೆ ಈ ಕೆಸರಲ್ಲಿ.......
ಎತ್ತು ಮತ್ತು ಕೋಣಗಳು ವಿಶ್ರಾಂತಿಯಲ್ಲಿ.


 
 ನೆಗಿಲ ಯೋಗಿ........
ಸೀನಣ್ಣ ಮತ್ತು ನಮ್ಮ ಚಿಕ್ಕಪ್ಪ ಹೂಟೆಯಲ್ಲಿ ನಿರತ....




  ಹೀಗೆ ನಮ್ಮಲ್ಲಿ ನಾಟಿ ಮಾಡುವುದು......





   ತಲೆ ಕತ್ತರಿಸಿಕೊಂಡ ಭತ್ತದ ಸಸಿ ಕಟ್ಟುಗಳು.





 ನೀವು ಎಲೆ ಅಡಿಕೆ ತಿನ್ನಿ, ನಾವು ಹಾಗೆ ಸ್ವಲ್ಪಹೊತ್ತು ಕೆಸರಲ್ಲಿ ಮಲಗಿ ವಿಶ್ರಮಿಸುತ್ತೇವೆ ಎನ್ನುವ ಕೋಣಗಳು




ಇರಿ ಬಂದೆ, ತಮ್ಮ ಒಬ್ನೆ ಹೂಡ್ತಾ ಇದ್ದಾನೆ, ನಾನು ಸ್ವಲ್ಪ ಹೊತ್ತು ನಳ್ಳಿ ಹೊಡಿತೀನಿ




ನಾನೂ ಕೆಲ್ಸ ಮಾಡ್ತಾ ಇದ್ನಪ್ಪಾ.......















ತಿಂಡಿ, ಎಲೆಅಡಿಕೆ ಎಲ್ಲ ಗದ್ದೆಯಲ್ಲೇ.....!





50 comments:

  1. ಪ್ರವೀಣ್...

    ಸುಂದರ ಫೋಟೊಗಳು !!
    ಮತ್ತೆ ಹಳ್ಳಿಗೆ ಹೋಗಿ ಬಂದಂತಾಯಿತು..

    ನಿಮ್ಮ ವಿವರಣೆಯೂ ಸೊಗಸಾಗಿದೆ ...

    ಅಲ್ಲಿ ಕೆಲಸ ಮಾಡುವವರ ಸಂಗಡ ಬೆಚ್ಚಗೆ ಎಲೆ ಅಡಿಕೆ ಹಾಕುವ ಮನಸಾಯಿತು !!

    ಊರಲ್ಲಿ ಮಸ್ತ್ ಮಜಾ ಮಡಿದ್ದೀರಿ ಅಂದಂತಾಯಿತು...

    ReplyDelete
  2. ನಾಟಿಯ ಫೋಟೋಗಳನ್ನು ನೋಡಿ ತುಂಬಾ ಖುಷಿಯಾಯಿತು.ನಾವು ತಿನ್ನುವ ಅನ್ನದ ಹಿಂದೆ ಎಷ್ಟೆಲ್ಲಾ ಜನರ ಶ್ರಮವಿದೆ,ಎಷ್ಟೆಲ್ಲಾ ಜನರ ಬೆವರಿದೆ!ಎಂದು ನೆನೆದು ಮನದಲ್ಲಿ ಒಂದು ಕೃತಜ್ಞತಾ ಭಾವ ಮೂಡಿತು.ಕಾಣದ ಅನ್ನದಾತರೆಲ್ಲರಿಗೆ ನನ್ನ ನಮನಗಳು."ಎನಿತು ಜನುಮದಲಿ,ಎನಿತು ಜೀವರಿಗೆ,ಎನಿತು ನಾವು ಋಣಿಯೋ!
    ನಿಜದಿ ನೋಡಿದರೆ,ಬಾಳು ಎಂಬುದು ಋಣದ ರತ್ನ ಗಣಿಯೋ!"

    ReplyDelete
  3. Sooper aagide nimma baraha... Photos are too good... Kanna munde ellavu nadedantaayitu :)

    ReplyDelete
  4. ಫೋಟೊಗಳು ಸೊಗಸಾಗಿವೆ!!
    ವಿವರಣೆಯೂ ಸೂಪರ್...

    ReplyDelete
  5. ಚೆ೦ದದ ವಿವರಣೆಯೊ೦ದಿಗೆ ಸು೦ದರ ಗದ್ದೆ..ಗದ್ದೆ ನೆಟ್ಟಿಯ ಫೋಟೊಗಳು..ಚೆನ್ನಾಗಿವೆ.
    ನಾನು ಚಿಕ್ಕವಳಿದ್ದಾಗ, ನನ್ನ ತವರಿನಲ್ಲಿ ಬತ್ತದ ಗದ್ದೆ ಇತ್ತು..ಗದ್ದೆಯ ಪಕ್ಕದ ಕೆರೆ..ಅಲ್ಲಿ ನಾನು ನನ್ನ ಅಣ್ಣ೦ದಿರೊಡನೆ ನೀರಾಡುವುದು ಎಲ್ಲಾ ನೆನಪಾಯ್ತು.
    ವ೦ದನೆಗಳು.

    ReplyDelete
  6. praveen next time nimma orrige karkondu hogi... habba... enta chenna ee malenaada siri.... naavu barale beku endeniside...

    ReplyDelete
  7. ಪ್ರವೀಣ್,
    ಹಳ್ಳಿಯ ನೆಟ್ಟಿ ಕಣ್ಣ ಮುಂದೆ ಬಂದಂದಾಯಿತು..ನಮ್ಮೂರ ಕಡೆ ನಾವು ಹುಟ್ಟುವುದಕ್ಕಿಂತ ಎಷ್ಟೋ ಮೊದಲೇ, ಬತ್ತದ ಗದ್ದೆಗಳನ್ನು ಅಡಿಕೆ ತೋಟವಾಗಿ ಮಾರ್ಪಡಿಸಿದ್ದರು.ಹಾಗೆ ಎಲ್ಲಿಯೂ ಹತ್ತಿರದಿಂದ ನೆಟ್ಟಿ ನೋಡುವ ಅವಕಾಶವೇ ಸಿಕ್ಕಿರಲ್ಲಿಲ್ಲ. ಕೆಲವೊಂದು ದಿನ ಗದ್ದೆಯ ಬದುವಿನಲ್ಲಿ ನಡೆದುಕೊಂಡು ಹೋಗಿದ್ದೇನೆ ಅಷ್ಟೇ.! ಆ ಎರಡು ಗದ್ದೆಯ ನಡುವಿನಲ್ಲಿ ನಡೆದು ಹೋಗುವಾಗಿನ ಆನಂದವನ್ನು ಬರೆಯಲು ಸಾಧ್ಯವಿಲ್ಲ.ಈಗಲೂ ನೆಟ್ಟಿ ಮಾಡುವ ನಿಮ್ಮೂರಿಗರಿಗೆ ನನ್ನ ಅಭಿನಂದನೆಗಳು.ಮತ್ತೆ ನಮ್ಮನೆಯವರ ಅಜ್ಜಿ ಪಾರ್ಧನ (ನೆಟ್ಟಿ ಮಾಡುವಾಗ ಹೇಳುವ ಹಾಡು) ಹೇಳುವುದರಲ್ಲಿ expert ಆಗಿದ್ರು..

    ReplyDelete
  8. super praveen.... photos nodta mansella tampayitu.... nimma ee photos nodi naanu seri naati madutidda adinagalu neenapayitu... yene andru gaddeyalli dudiyuvaaga mado oota and kudiyo coffe ruchine chanda rii.......

    ReplyDelete
  9. ಪ್ರವೀಣ,
    ನಟ್ಟಿ ಮಾಡುವದರ ಮಾಹಿತಿ ತಿಳಿದುಕೊಂಡಂತಾಯಿತು. ನಿಮ್ಮ ಫೋಟೋಗಳು ಬಹಳ ಚೆನ್ನಾಗಿ ಬಂದಿವೆ. ಗದ್ದೆಯ ನೀರಿನಲ್ಲಿ ಕಾಣುವ ಪ್ರತಿಬಿಂಬಗಳೂ ಸಹ ತುಂಬ clear ಆಗಿ ಬಂದಿವೆ. ಅಭಿನಂದನೆಗಳು.

    ReplyDelete
  10. ಪ್ರಕಾಶಣ್ಣ,
    ಊರಲ್ಲಿ ಅದೂ ಮಳೆಗಾಲದಲ್ಲಿ ಎಲೆ ಅಡಿಕೆ ಹಾಕುವ ಮಜಾ ಅನುಭವಿಸಿಯೇ ತೀರಬೇಕು. ಊರಲ್ಲಿ ನಿಜವಾಗಿಯೂ ಮಸ್ತಾಗೇ ಇದ್ದೆ.
    ಧನ್ಯವಾದಗಳು ಪ್ರತಿಕ್ರಿಯೆಗೆ.

    ReplyDelete
  11. ಗುರುಗಳೆ,
    ರೈತರ ಕಷ್ಟ ಆತನಿಗೇ ಗೊತ್ತು. ಆದರೆ ಯಾವಾಗಲೂ ತಾನಾಯಿತು ತನ್ನ ದುಡಿಮೆಯಾಯಿತು ಎಂದಷ್ಟೇ ಇರುವ ರೈತ ಎಂದಿಗೂ ತಲೆಕೆಡಿಸಿಕೊಳ್ಳಲಾರ. ಭರವಸೆಯೇ ಜೀವನ. ಸದಾ ದುಡಿಮೆಯೇ ಚಿಂತೆ. ತಾನು ಬೆವರು ಇಳಿಸಿ ಎಲ್ಲರ ಹೊಟ್ಟೆ ತುಂಬಿಸುತ್ತಾನೆ. ಎಂದಿಗೂ ಆ ಅಹಂ ರೈತನಲ್ಲಿ ಬರುವುದೇ ಇಲ್ಲ!
    ರೈತನ ಮೇಲಿಟ್ಟಿರುವ ಪ್ರೀತಿ ನಿಮ್ಮಲ್ಲಿ ಹೀಗೇ ಇರಲಿ. ಹಾಗೆಯೇ ನನ್ನ ಮೇಲೂ ಕೂಡಾ.
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  12. ಮಾನಸಾ,
    ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ, ನಮ್ಮೂರನ್ನು ಮೆಚ್ಚಿಕೊಂಡಿದ್ದಕ್ಕೆ.....

    ReplyDelete
  13. ಮಹೇಶಣ್ಣಾ,
    ಧನ್ಯವಾದಗಳು.
    ನಿಮಗೂ ನಮ್ಮೂರಿಗೆ ಬರಲು ಹೇಳಿದ್ದೆ. ಆದರೆ ನೀವು ಬರಲಿಲ್ಲ!

    ReplyDelete
  14. ಮನಮುಕ್ತಾ....

    ಹಳ್ಳಿಯ ಮಕ್ಕಳಾದ ನಾವುಗಳೇ ಪುಣ್ಯವಂತರು. ಸುಂದರ ಪ್ರಕೃತಿಯ ಮಡಿಲಲ್ಲಿ ಆಡಿ ಬೆಳೆದು ಬಂದವರು. ಆ ನೆನಪುಗಳೂ ಹಾಗೆ, ಎಂದಿಗೂ ನವಚೆತನಾ....
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  15. ಸುಗುಣಕ್ಕ,
    ನಿಮಗೆ ಪದೇ ಪದೇ ಫೋನ್ ಮಾಡಿ ಬನ್ನಿ ಎಂದು ಕರೆಯುತ್ತಿದ್ದೆ. ಆದರೆ ನೀವು ಬರಲಿಲ್ಲ. ಮುಂದಿನ ಸಾರಿ ಖಂಡಿತಾ ಬನ್ನಿ. ಮಲೆನಾಡಿಗೆ ಸದಾ ಸ್ವಾಗತ ನಿಮಗೆ.
    ಹಾಗೆಯೆ ನಮ್ಮೂರನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete
  16. ಪ್ರವೀಣ್,

    ನಿಮ್ಮ ಊರಿನ ಗದ್ದೆ ಕೆಲಸ ನಾಟಿ ಮಾಡುವುದು, ತಿಂಡಿ ಎಲೆಅಡಿಕೆ ಇತ್ಯಾಗಿಗಳನ್ನು ಫೋಟೊ ಮೂಲಕ ಚೆನ್ನಾಗಿ ತೋರಿಸಿದ್ದೀರಿ..ಮಣ್ಣಿನ ಮಗನಾಗಿ ನೀವು ಗದ್ದೆ ನಾಟಿ ಮಾಡಿ ಹಳ್ಳೀಗೂ ಸೈ ದಿಲ್ಲಿಗೂ ಸೈ ಅಂಥ ಅಕ್ಷರಶಃ ಕಾರ್ಯರೂಪಕ್ಕೆ ತಂದಿದ್ದೀರಿ...ಸೂಪರ್..ಇನ್ನಷ್ಟು ನಿಮ್ಮೂರಿನ ಘಟನೆಗಳು ಚಿತ್ರಗಳು ಬರುತ್ತಿರಲಿ...

    ReplyDelete
  17. ವನಿತಾ ಮೇಡಂ,
    ಈಗೀಗ ಮಲೆನಾಡಿನ ಎಲ್ಲಾ ಕಡೆಗಳಲ್ಲೂ ಗದ್ದೆಗಳು ಅಡಿಕೆ ತೋಟವನ್ನಾಗಿ ಮಾರ್ಪಾಟು ಹೊಂದಿವೆ. ಗದ್ದೆಗಳು ತುಂಬಾ ಕಡಿಮೆಯಾಗಿವೆ. ಆದರೂ ನಮ್ಮೂರಲ್ಲಿ ಸ್ವಲ್ಪ ಪರವಾಗಿಲ್ಲ ಎಂದೇ ಹೇಳಬೇಕು. ಇನ್ನೂ ವರ್ಷದಲ್ಲಿ ಎರೆಡು ಬೆಳೆಗಳು, ಕುಚ್ಚಲಕ್ಕಿ ಪದ್ಧತಿ ನಮ್ಮೂರಲ್ಲಿ ಇದೆ.
    ಹಾಗೆಯೇ ಹಾಡು ಹೇಳುವ ಪದ್ಧತಿ ಅಲ್ಲಲ್ಲಿ ಇದೆ. ಆದರೆ ಮೊದಲಿನಂತೆ ಜಾನಪದ ಗೀತೆಗಳಿಗೆ ಬದಲಾಗಿ ಚಿತ್ರಗೀತೆಗಳು ಬಳಕೆಯಾಗುತ್ತಿವೆ.
    ಧನ್ಯವಾದಗಳು ಪ್ರತಿಕ್ರಿಯೆಗೆ, ಮೆಚ್ಚಿಕೊಂಡಿದ್ದಕ್ಕೆ.

    ReplyDelete
  18. ತರುಣ್,

    ನಾಟಿಯ ಸಮಯದ ಸುಂದರ ಸಮಯಗಳೆ ಹಾಗೆ, ೧೫-೨೦ ಜನರು ಒಟ್ಟಾಗಿ, ಕೆಲಸ ಮಾಡುತ್ತಾ, ಹರಟೆ ಹೊಡೆಯುತ್ತಾ ಒಂದಾಗಿರುತ್ತಾರೆ. ಗದ್ದೆಯಲ್ಲೇ ಊಟ ಮಾಡುವುದು ರೋಮಾಂಚಕಾರಿ ಅನುಭವ. ಅನುಭವಿಸಿದವನೇ ಬಲ್ಲ!
    ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ. ಹೀಗೇ ಬರ್ತಾ ಇರಿ.......

    ReplyDelete
  19. ಸುನಾಥ್ ಜೀ.....
    ಫೋಟೋಗಳನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete
  20. ಶಿವಣ್ಣ, ಹಳ್ಳಿಯ ರೈತ ಮಗನಾಗಿ ಹುಟ್ಟಿ, ಅನ್ನ ಕೊಟ್ಟ ಮಣ್ಣನ್ನು, ರೈತ ಕೆಲಸವನ್ನು ಮರೆತರೆ ದೇವರು ಮೆಚ್ಚಲಾರ. ಹಳ್ಳಿ ನಮಗೆ ಜೀವನ, ದೆಹಲಿ ಬದುಕಲು ಒಂದು ಅವಕಾಶ ಅಷ್ಟೆ. ನಾವು ಎಂದಿಗೂ ಮಣ್ಣಿನ ಮಕ್ಕಳೆ!
    ಮಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete
  21. ಲೇಖನ ಹಾಗೂ ಚಿತ್ರಗಳನ್ನು ಕ೦ಡು ಮನಸ್ಸಿಗೆ ಒಮ್ಮೆ ಹಾಯೆನಿಸಿತು.. ಮುದ ನೀಡಿದ ಬರಹ ಹಾಗೂ ಚಿತ್ರಗಳು. ನಿಮ್ಮ ಪ್ರಯತ್ನ ಸಾರ್ಥಕತೆಯನ್ನು ಪಡೆದಿದೆ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete
  22. ಪ್ರವೀಣ,

    ಉಳುವ ಯೋಗಿಯ ನೋಡಲ್ಲಿ...ಎಂಬ ಗೀತೆ ಕಣ್ಮುಂದೆ ಬಂತು ನಿಮ್ಮ ಲೇಖನ ಓದಿ.
    ಸುಂದರ ನಿರೂಪಣೆ ಮತ್ತು ಅಪರೂಪದ ಚಿತ್ರಗಳನ್ನು ನೀಡಿದ್ದಕ್ಕೆ ಧನ್ಯವಾದಗಳು.

    ReplyDelete
  23. ಲೇಖನ ಓದಲು ಹಿತವಾಗಿದೆ ಚಿತ್ರಗಳು ಕೊಡ ನಿಮಗೊಂದು ವಿಷ್ಯ ಗೊತ್ತ ಸರ್ ನನಗೆ ಈ ಅಕ್ಕಿ ಹೇಗೆ ಬೆಳಿತಾರೆ ಅನ್ನೋದೇ ಗೊತ್ತಿರ್ಲಿಲ್ಲ ನಾನು ಕಾಲೇಜ್ ಓದುವಾಗ ಏನ್ ಎಸ್ ಎಸ್ ಕ್ಯಾಂಪ್ ಗೆ ಅಂತ ಒಂದು ಹಳ್ಳಿಗೆ ಹೋಗಿದ್ವಿ ಅವಗ್ಲೆ ಹೊತ್ತಗಿದ್ದು ಭತ್ತದಿಂದ ಅಕ್ಕಿ ಆಗುತ್ತೆ ಅಂತೆ ಹ್ಹ ಹ್ಹ ಹ್ಹ ಹ್ಹ

    ReplyDelete
  24. ಪ್ರವೀಣ್
    ಓದಿ, ಚಿತ್ರ ನೋಡಿ ಬಹಳ ಖುಷಿ ಆಯ್ತು, ನಾನು ಪಿ.ಯು.ಸಿ.ಆದ ನ೦ತರ ಒ೦ದು ವರ್ಷ ಪೂರ್ತಿ ಮನೆಯಲ್ಲೇ ಇದ್ದೆ, ಆವಾಗ, ಗದ್ದೆ ಹೂಟೆ , ಸಸಿ ಕೀಳೋದು, ತೆವರು ಕಡಿಯೋದು, ನಾಟಿ ಎಲ್ಲ ಮಾಡಿದ ಸ್ವಾನುಭವ ನನಗಿದೆ. ತುಳುನಾಡಿನಲ್ಲಿ ಭತ್ತದ ಸಸಿಗೆ "ನೇಜಿ:" ಅ೦ತ ಹೇಳ್ತೇವೆ. ಆಗೆಲ್ಲ, ಗದ್ದೆ ನಾಟಿ ಮಾಡುವ ಹೆ೦ಗಸರ ಬಾಯಲ್ಲಿ ಜನಪದ ಹಾಡು (ಪಾಡ್ದನ ) ಗಳು ಬರುತ್ತಿದ್ದವು, ಈಗಿನವರಿಗೆ ಅದು ಗೊತ್ತಿರದೇ ಇರಬಹುದು. ಹಾಗೇನೆ ಗದ್ದೆ ಹೂಟೆ ಮಾಡುವಾಗಲೂ ನೇಗಿಲು ಹಿಡಿದು, ಜನಪದ ಶೈಲಿಯಲ್ಲಿ ಹಾಡು ಹೇಳುವ ಕ್ರಮ ಇತ್ತು. ನಾನು ನೇಗಿಲು ಹಿಡಿದು ಗದ್ದೆ ಉಳುಮೆ ಮಾಡಿದ್ದೇನೆ, ಎಲ್ಲ ನೆನಪಾಯಿತು. ನಿಮ್ಮ ಊರಿನ ಹಸಿರು ಚಿತ್ರ ನೋಡಿ, ಊರಿಗೆ ಹೋಗಿ ಬ೦ದ ಅನುಭವ ಆಯ್ತು.

    ReplyDelete
  25. ಶ್ರೀಯುತ ನಾವಡರೆ,
    ಕೆಲವು ನೆನಪುಗಳು, ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ ಅಷ್ಟೆ. ಅದನ್ನು ಮೆಚ್ಚಿಕೊಂಡ ನಿಮಗೆ ವಂದನೆಗಳು.

    ReplyDelete
  26. "ಅಪ್ಪ-ಅಮ್ಮ"
    ಪ್ರತಿಕ್ರಿಯಿಸಿದ ನಿಮಗೆ ಧನ್ಯವಾದಗಳು.

    ReplyDelete
  27. ಮಂಜು,
    ನಿಮಗಾದ ಅನುಭವ ಸಹಜ. ನಗರಗಳಲ್ಲೇ ಹುಟ್ಟಿ ಬೆಳೆದ ಜನರಿಗೆ ಅಕ್ಕಿ ಹೇಗೆ ಬರುತ್ತೆ ಎಂದ ಈಗಲೂ ಗೊತ್ತಿಲ್ಲ!
    ಸಧ್ಯ ನೀವು ಈಗಲಾದ್ರು ತಿಳಿದುಕೊಂಡ್ರಲ್ಲ!
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.........

    ReplyDelete
  28. ಪರಾಂಜಪೆ ಸರ್,
    ನೀವೂ ಕೂಡಾ ಮಣ್ಣಿನ ಮಗನೇ ಎಂದು ತಿಳಿದು ತುಂಬಾ ಸಂತೋಷವಾಯಿತು. ಈಗಿನ ಯುವಜನತೆ ಹಳ್ಳಿ ಬಿಟ್ಟು ನಗರ ಸೇರಿ ರೈತಾಪಿಯನ್ನೇ ಮರೆತು ಬಿಟ್ಟಿದ್ದಾರೆ. ನಮಗೆ ಅನ್ನ ಕೊಡುವ ರೈತ ವೃತ್ತಿಯನ್ನು ಕೊನೆ ಪಕ್ಷ ನೆನಪಿನಲ್ಲಾದರೂ ಉಳಿಸಿಕೊಂಡರೆ ಜೀವನ ಸಾರ್ಥಕ...
    ಧನ್ಯವಾದಗಳು.....

    ReplyDelete
  29. ಪ್ರವೀಣ್ ಅವರೇ... ಗದ್ದೆಯ ಚಿತ್ರಗಳನ್ನು ನೋಡಿ ತುಂಬಾ ಖುಷಿಯಾಯಿತು.. ನಾವು ಚಿಕ್ಕವರಿದ್ದಾಗ ಚಿಕ್ಕಪ್ಪನ ಜೊತೆಗೆ ಎತ್ತಿನ್ ಗಾಡಿಲಿ ಕುಳಿತು ಗದ್ದೆಗೆ ಹೊಗ್ತಿದ್ವಿ... ಆ ಮಜ಼ಾನೇ ಬೇರೆ... ಆ ಹಚ್ಚ ಹಸುರಿನ ಪೈರನ್ನು ನೋಡಲು ಈಗಲೂ ತುಂಬಾ ಸಂತೋಷವೆನಿಸುತ್ತೆ...

    ReplyDelete
  30. ಪ್ರವೀಣ್, ಬಹಳ ಇಷ್ಟವಾಯಿತು. ರೈತ ನಮ್ಮ ಬೆನ್ನೆಲುಬು, ಯಾರು ಯಾವುದೇ ವೃತ್ತಿಯನ್ನು ಮಾಡಿದರೂ ಕೊನೆಗೆ ಬೇಕಾಗುವುದು ಅನ್ನವೇ ! ಅದು ಅಕ್ಕಿಯೋ, ರಾಗಿಯೋ, ಗೊಧಿಯೋ ಅಥವಾ ಇನ್ಯಾವುದೋ, ಒಟ್ನಲ್ಲಿ ಅನ್ನ. ಚಿತ್ರಗಳು ಬಹಳ ಮುದ ನೀಡಿವೆ, ನನಗೂ ಸಲ್ಸಲ್ಪ ಪರಾಂಜಪೆಯವರತರ ಅನುಭವ ಇದ್ದರೂ ಈಗ ಅದಕ್ಕೇ ಅವಕಾಶವಾಗುತ್ತಿಲ್ಲ, ಊರಲ್ಲಿ ಇರುವ ದಿನಗಳೇ ಕಮ್ಮಿ ! ನಿಮ್ಮ ಲೇಖನಕ್ಕೆ, ಹಳ್ಳಿಯನ್ನು ನೆನಪಿಸಿದ್ದಕ್ಕೆ ಮತ್ತು ನಿಜವಾದ ಅನ್ನದಾತನನ್ನು ನೆನೆಯಲು ಕರೆದಿದ್ದಕ್ಕೆ ನಮನಗಳು.

    ReplyDelete
  31. ನಾನು ಆಂತರ್ಯದಿಂದ ಅತ್ಯಂತ ಪ್ರೀತಿಸುವ ಮಹಾತ್ಮರು ಇವರು- ಒಂದು ಹನಿ ಬಿದ್ದರೂ ಡೆಟ್ಟಾಲ್ ಹಾಕಿ ಗಸಗಸ ತಿಕ್ಕಿ ತೊಳೆಯುವ ಜನರಿಗೆ ಕೆಸರಲ್ಲಿ ಮುಳಿಗೆದ್ದು ನಮ್ಮ ಹೊಟ್ಟೆಗೆ ಅನ್ನ ನೀಡುತ್ತಿರುವ ಮಹಾತ್ಮರುಗಳು- ನಿಜವಾದ ಮನುಷ್ಯರೂಪಿ ಭಗವಂತರುಗಳು- ಧನ್ಯವಾದ ಫೋಟೋಕ್ಕೆ ಬರಹಕ್ಕೆ ಪ್ರವೀಣ್

    ReplyDelete
  32. ಯಾರೂ ಅರಿಯದ ನೇಗಿಲಯೋಗಿಯೇ
    ಲೋಕಕೆ ಅನ್ನವನೀಯುವನು..

    ಅದ್ಭುತ ಲೇಖನ..

    ReplyDelete
  33. pravin,
    maNNina kelasada bagge nimma aashTe noDi nanagu khushiyaayitu...... nimma jote naanu banda haagaayitu.....


    ondu doubt ..... nivu kelasa maaDiddiraa antiraa..... haagaadre photo hoDedavaru yaaru.....? hha hhaa...

    ReplyDelete
  34. ಅಲೆಲೆಲೆ ತಂಟೆ ಮಾಡೋ ಸುಂದರಾ
    ಎಲ್ಲೀ ಗದ್ದೆಗುಂಟ ಕೆಸರಾಟ...? ಹೋ ಹೋ
    ನಾಟಿ ಮಾಡಿ ಕೆಸರ ಗದ್ದೆ ಚಂದಿರಾ
    ಭಾಳ ಖುಷಿಯಾಯ್ತೋ ನಿನ್ನಾಟ....
    ಹಹಹ...ನನಗೆ ನನ್ನ ತೋಟದ ಗೇಯ್ಮೆ ದಿನಗಳು ನೆನಪಾದ್ವು....ಪ್ರವೀಣ್...ಸೂಪರ್ ಕಣಪ್ಪ..ಮಣ್ಣಿನ ಮಕ್ಳು ಅಂದ್ರೆ ಏನೋ ಒಂಥರಾ...ಆಪ್ಯಾಯತೆ ಆತ್ಮೀಯತೆ ...ಜೀತೆ ರಹೋ...ಯಾರ್...

    ReplyDelete
  35. ಕಬ್ಬಿನಾಲೆಯಲ್ಲಿ ಮಾವನ ಮನೆಯಲ್ಲಿ ನೋಡುತ್ತಿದ್ದ ಭತ್ತದ ನೇಜಿ(ನಾಟಿ) ಮತ್ತೆ ಕಣ್ಣಿಗೆ ಕಟ್ಟಿದ ಹಾಗಾಯಿತು. ಮನಸ್ಸಲ್ಲಿ ಉಳಿದ ನಟ್ಟಿ ತುಳು ಪಾಡ್ದನ(ಜನಪದ ಗೀತೆ)ಇನ್ನು ತಲೆಯಲ್ಲಿದೆ.
    "ಗಿರಿಕೆದ ಇಲ್ಲೋದು ಗಿರಿಜಮ್ಮೆ ನಟ್ಟಿಗ ಬರ್ಪೋಲ್ಗೆ ಬರ್ಪೋಲ್ಲಪ್ಪ ಬರ್ಪೋಲು ಕೋಮಣ ಸುತ್ತೊಲೋ" ಅಂಥಾ ಚೆದಿಕೆಯ ಪಾಡ್ದನವದು.
    ತುಂಬಾ ನವಿರಾಗಿ- ನಟ್ಟಿ ಕೆಲಸ, ಕೂಲಿಸಮಸ್ಯೆಗೆ ಸಮೂಹ ಸಹಕಾರದಿಂದ ರೈತರು ಕಂಡುಕೊಂಡ ಪರಿಹಾರ, ಅವರ ನಲಿವು-ಉಳಿವು, ಜೀವನಕ್ರಮ, ಆಧುನಿಕತೆಯ ಪರಿಣಾಮ ಇತ್ಯಾದಿ ಸುಂದರವಾಗಿ ಹೇಳಿದ್ದಿರಿ ಜೊತೆಗೆ ಉತ್ತಮ ಚಿತ್ರಗಳನ್ನು ಪೂರಕವಾಗಿ ಸೇರಿಸಿದ್ದಿರಿ.

    ನೋಡಿ ಕೋಣ-ಎಮ್ಮೆಗಳು ವಿಶ್ರಾಂತಿಯಲ್ಲಿ ಗದ್ದೆಯಲ್ಲಿ ಮಲಗಿದ್ದರೆ ಎತ್ತುಗಳು ನಿಂತೇ ದಣಿವಾರಿಸಿಕೊಳ್ಳುತ್ತಿವೆ. ಅದಕ್ಕೆಹಿರಿಯರು ಮಾಡಿದ ಗಾದೆ ಎತ್ತು ಏರಿಗೆ-ಕೋಣ ನೀರಿಗೆ" ಸರಿಯಾಗಿಯೇ ಇದೇ.
    ಧನ್ಯವಾದಗಳು.

    ReplyDelete
  36. ಪ್ರವೀಣ್,

    ತಡವಾಗಿ ಪ್ರತಿಕ್ರಿಯಿಸುತ್ತಿರುವುದಕ್ಕೆ ಕ್ಷಮೆ ಇರಲಿ... ಈ ಚಿತ್ರಗಳನ್ನು ಓದಿ ಊರಿನ ನೆನಪು ತುಂಬಾ ಆಯಿತು. ಯಾಕೆ ಅಂದರೆ ನಮ್ ಕಡೆನು ಇದೆ ರೀತಿ, ಎಲ್ಲಾನು ಇದೆ ತರ. ನೋಡಿ ಒಂದ್ ಸಲ ನಮ್ಮುರೆ ಅನ್ನಿಸಿತು, ಸುಂದರವಾಗಿ ನಿರೂಪಿಸಿದ್ದೀರಿ ಧನ್ಯವಾದಗಳು ...

    ReplyDelete
  37. ಪ್ರಗತಿ ಮೇಡಮ್,
    ಹಳ್ಳಿಯ ಜೀವನದ ಕ್ಷಣಗಳು ಅತೀ ಮಧುರ..........
    ಧನ್ಯವಾದಗಳು......

    ReplyDelete
  38. ವಿ ಆರ್ ಭಟ್ ಸರ್,
    ಅನ್ನದಾತನೇ ದೇಶದ ಬೆನ್ನೆಲುಬು ಎಂಬುದು ಸತ್ಯ ಸಂಗತಿ, ಅನ್ನದಾತನನ್ನು ನೆನೆಯುವುದುನಮ್ಮ ಆಧ್ಯ ಕರ್ತವ್ಯ ಕೂಡ.
    ನಾವೆಲ್ಲರೂ ರೈತ ಮೂಲದವರೇ ಎಂದು ಖುಷಿ ಪಡೋಣ.........
    ಧನ್ಯವಾದಗಳು......

    ReplyDelete
  39. ಸುಬ್ರಮಣ್ಯ ಸರ್........
    :):)

    ReplyDelete
  40. ಶರ್ಮಾ ಜೀ,
    ರೈತರ ಮೇಲೆ ನಿಮಗಿರುವ ಪ್ರೀತಿ, ಅಭಿಮಾನ ಹೀಗೆ ಇರಲಿ, ಧನ್ಯವಾದಗಳು ಪ್ರತಿಕ್ರಿಯೆಗೆ........

    ReplyDelete
  41. ಕತ್ತಲೆ ಮನೆ...
    ಧನ್ಯವಾದಗಳು.

    ReplyDelete
  42. ದಿನಕರ್ ಸರ್,
    ಮಣ್ಣಿನ ಮಕ್ಕಳಾಗಿ ಮಣ್ಣಿನ ಕೆಲಸ ಮಾಡಲು ನಾಚಿಕೆ ಯಾಕೆ ಅಲ್ವಾ?
    ಆಗಾಗ ಫೋಟೋ ತೆಗೀತಾ, ಆಗಾಗ ಕೆಲ್ಸ ಮಾಡ್ತಾ ಇದ್ದೆ ಸ್ವಾಮೀ..........!!!
    ಧನ್ಯವಾದಗಳು.

    ReplyDelete
  43. ಅಜಾದ್ ಸರ್,
    ಮಣ್ಣಿನ ಮಕ್ಕಳನ್ನು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು. ಹಾಗೇ ನಿಮ್ಮ ಆಶಿರ್ವಾದಕ್ಕೆ ಬಹುತ್ ಬಹುತ್ ಶುಕ್ರಿಯಾ..........

    ReplyDelete
  44. ಸೀತಾರಾಂ ಸರ್,
    ಹಿಂದಿನ ದಿನಗಳಂತೆ ನಟ್ಟಿಯಲ್ಲಿ ಈಗ ಪಾಡ್ದನ/ಜಾನಪದ ಗೀತೆಗಳು ತುಂಬಾ ಕಡಿಮೆಯಾಗಿದೆ. ಚಿತ್ರಗೀತೆಗಳು ಅಲ್ಲಲ್ಲಿ ಕೇಳಿಬರುತ್ತದೆ ಅಷ್ಟೇ!
    ಕೋಣಕ್ಕೆ ನೀರು, ಕೆಸರು ಎಂದಏ ಭಾಳೂ ಇಷ್ಟ. ಅದೇ ಎತ್ತುಗಳಿಗೆ ನೀರು ಇಷ್ಟ ಇಲ್ಲ, ಅದಕ್ಕೆ ದಡದತ್ತ ಎಳೆಯುತ್ತವೆ ಅಲ್ವಾ?
    ಢನ್ಯವಾದಗಳು.

    ReplyDelete
  45. ಅಶೋಕ್,
    ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ...........

    ReplyDelete
  46. ಚೆಂದದ ಚಿತ್ರಗಳೊಂದಿಗೆ ಮೂಡಿಬಂದ ಉತ್ತಮ ಬರಹ.
    ಹಳ್ಳಿಯಲ್ಲಿ ಇನ್ನೂ ತಮ್ಮ ಬೇರುಗಳನ್ನು ಉಳಿಸಿಕೊಂಡವರಿಗಂತೂ
    ಖಂಡಿತ ಮೆಚ್ಚುಗೆಯಾಗುವಂತಿದೆ.
    ಭತ್ತದ ಕೃಷಿ ಗೊತ್ತಿಲ್ಲದವರಿಗೂ,ತುಂಬಾನೇ ಮಾಹಿತಿಗಳನ್ನು ಕೊಟ್ಟಿದ್ದೀರಾ,
    ಅಭಿನಂದನೆಗಳು

    ReplyDelete
  47. ಮಾಹಿತಿ ಕೊಡುವಂತಹ ಚಿತ್ರ ಲೇಖನ ಚೆನ್ನಾಗಿದೆ ಪ್ರವೀಣ್ ಸಾರ್ ...

    ನನಗೂ ಒಮ್ಮೆ ಟೀ ಇಳಿಸಿ ನಂತರ ಎಲೆ ಅಡಿಗೆ ಹಾಕೋ ಮನಸಾಯ್ತು ನೋಡಿ :)

    ReplyDelete
  48. praveen!!
    Photos super!!
    i was thinking of writing abt 'sri' method of paddy cultivation . you beat me to it
    nice photo feature!!!
    me or husband go to teerthahalli once in a fortnight
    :-)

    ReplyDelete
  49. ಇಲ್ಲಿ ತೆಗೆದ ಫೋಟೋಗಳು ಪಟ್ಟಣದಲೀ ನೆಲೆಸಿ ನಮ್ಮ ಮಲೆನಾಡಿನಂತ ಸುಂದರ ಹಳ್ಳಿ ಯನ್ನ ಅವಸ್ಯವಾಗಿ. ಅನಿವಾರ್ಯವಾಗಿ ಮಿಸ್ ಮಾಡಿಕೊಂಡವರಿಗೆ ಮತ್ತೆ ಹಳ್ಳಿಯತ್ತ ಮುಖ ಮಾಡುವಂತ್ತೆ ನೆನಪಿಸಿದ್ದಿರಿ ..........
    ನಮ್ಮೂರಿನ ಪರಿಸರವೇ ಅಂತಹುದು ............! ಧನ್ಯವಾದಗಳು ಪ್ರವೀಣ ಅಣ್ಣ ............

    ReplyDelete