Tuesday, July 6, 2010

ಸವಿನೆನಪು





ನಾವೂ ಅಲ್ಪಸ್ವಲ್ಪ ಪುಣ್ಯವಂತರು ಅಂತ ಸಾಬೀತಾಯಿತು. ಬೆಂಕಿಯಂತೆ ಸುಡುತ್ತಿದ್ದ ದೆಹಲಿ ಈಗ ಧೋ ಎಂದು ಸುರಿವ ಮಳೆಗೆ ತಣ್ಣಗಾಗಿದೆ. ಮೋರಿಯಿಂದ ಹರಿದ ನೀರಿನಿಂದ ತುಂಬಿರುತ್ತಿದ್ದ ಯಮುನೆ ಮಳೆನೀರಿನಿಂದ ಶುದ್ಧವಾಗುತ್ತಿದೆ! ರಸ್ತೆಗಳೇ ನಡಿಯಾಗುತ್ತಿವೆ. ವಾಹನಗಳು ಗಂಟೆಗಟ್ಟಲೆ ರಸ್ತೆಯಲ್ಲೇ ನಿಲ್ಲುವಂತಾಗಿದೆ.




ಇಂದು ಯಾಕೋ ಮನೆಯ ನೆನಪು ತುಂಬಾ ಕಾಡ್ತಾ ಇದೆ. ಮಲೆನಾಡಿನ ಮಳೆಗಾಲದ ಸುಂದರ ದೃಶ್ಯಗಳು ಅತಿಯಾಗಿ ನೆನಪಾಗುತ್ತಿವೆ. ಎಡೆಬಿಡದೆ ಧೋ ಎಂದು ಸುರಿವ ಬಿರುಮಳೆ, ಕುಳಿರ್ಗಾಳಿ ಮಿಂಚು ಗುಡುಗು ಸಿಡಿಲು, ತುಂಬಿಹರಿವ ಹಳ್ಳ ಕೊಳ್ಳ ಹೊಳೆ ನದಿಗಳು, ಕಂಬಳಿ ಕೊಪ್ಪೆ ಹೊದ್ದು ಹೊಲ ಉಳುವ ರೈತ, ನಾಟಿ ಮಾಡುವ ಹೆಂಗಸರು, ಅಡಿಕೆ ತೋಟದ ಔಷಧಿ ಹೊಡೆಯುವ ಕಾರ್ಯದಲ್ಲಿ ನಿರತ ಗಂಡಸರು, ಹೆಮ್ಮೆಯಿಂದ ಹಸಿರು ಹುಲ್ಲು ಮೇಯುವ ದನಕರುಗಳು..............ಒಂದಾ ಎರೆಡಾ?
ಹೀಗೆ ಮಲೆನಾಡಿನ ಸೌಂದರ್ಯಗಳನ್ನು ವರ್ಣಿಸುತ್ತಾ ಹೋದರೆ ಮುಗಿಯುವುದೇ ಇಲ್ಲ!



ಸದಾ ಬೆಳ್ಮುಗಿಲು ಮುಚ್ಚಿಕೊಂಡಿರುವ ಕುಂದಾದ್ರಿ ಬೆಟ್ಟ, ಬರೆ ಬೆಟ್ಟ, ಕೆಂಪಗೆ ಬಣ್ಣದೋಕುಳಿ ಹರಿದಂತೆ ಕಾಣುವ ಮಾಲತಿ ನದಿ, ತಾ ಸಾಗುವ ದಾರಿಯಲ್ಲಿ ನೂರಾರು ಜಲಪಾತಗಳನ್ನು ಸೃಷ್ಟಿಸಿಕೊಂಡು ಕಣ್ಮನ ತಣಿಸುವ ನಮ್ಮೂರ ಹೊಳೆ, ಬರೆ ಬೆಟ್ಟದ ಹೆಬ್ಬಂಡೆಯ ಮೇಲಿಂದ ನೀರಿಳಿಯುವಾಗ ಆಗಸದಿಂದ ಹಾಲಿನ ಹೊಳೆ ಹರಿದಂತೆ ಕಾಣುವ ದೃಶ್ಯ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಆ ಪ್ರಾಕೃತಿಕ ಸೌಂದರ್ಯ ಕಾಂಕ್ರೀಟ್ ಕಾಡಿನಲ್ಲಿ ಎಲ್ಲಿಂದ ಬರಲು ಸಾಧ್ಯ!



ನಾವು ಚಿಕ್ಕವರಿದ್ದಾಗ ನಮ್ಮ ಆಟ ಪಾಠಗಳೇನು. ತಿನ್ನುವ ಯಂತ್ರಗಳು ನಾವು! ಈಗಿನ ಹಾಗೆ ತಿಂದಿದ್ದು ಸ್ವಲ್ಪ ಹೆಚ್ಚು ಕಡಿಮೆಯಾದರೆ  ಅಜೀರ್ಣ ಆಗ್ತಾ ಇರ್ಲಿಲ್ಲ. ತಣ್ಣಗೆ ಕೊರೆವ ಚಳಿಗೆ ಬೇಯಿಸಿದ ಬಿಸಿಬಿಸಿ ಗೆಣಸು ತಿನ್ನುವಾಗ ಎಷ್ಟು ಸುಖ! ಸಂಗ್ರಹಿಸಿಟ್ಟ ಹಲಸಿನ ಬೀಜಗಳನ್ನು ಸುಟ್ಟೋ, ಬೇಯಿಸಿಯೋ ತಿನ್ನುವಾಗ ಸ್ವರ್ಗ ಯಾಕೆ ಬೇಕು? ಜಾಯಮಾನವೆಲ್ಲ ಹೀಗೆ ಕಳೆಯುವ ಆಸೆ ಯಾರಿಗೆ ಆಗುವುದಿಲ್ಲ ಹೇಳಿ? ಏನಾದರೂ ತಿನ್ನುವ ಮನಸಾದಾಗ ಕುಚ್ಚಲಕ್ಕಿ ಹುರಿದು ಬೆಲ್ಲದೊಂದಿಗೆ ಕಲಸಿ ಬಿಸಿಬಿಸಿ ಉಂಡೆ ಮಾಡಿ ತಿಂದರೆ ಆಹಾ! ಓಹೋ! ಈಗಿನ ಡೈರಿ ಮಿಲ್ಕು, ಫೈ ಸ್ಟಾರೂ, ಕ್ರಂಚು, ಮಂಚುಗಳೆಲ್ಲ ನಮಗೆಲ್ಲಿತ್ತು ಸ್ವಾಮಿ, ಇವುಗಳೇ ನಮಗೆ ಸರ್ವಸ್ವ ಅಲ್ವಾ? ದೊಡ್ಡವರೆಲ್ಲ ಗದ್ದೆ ತೋಟಕ್ಕೆಂದು ಕೆಲಸಕ್ಕೆ ಹೋಗಿ ಸಂಜೆ ಬರುವುದರೊಳಗೆ ನಮ್ಮ ಲೂಟಿಗಳೇನು ಕಡಿಮೆ ಅಗ್ತಿತ್ತೆ? ಹರವೆ, ಬುಟ್ಟಿ ಸಂದು ಗೊಂದುಗಳಲ್ಲಿ ಮುಚ್ಚಿಟ್ಟ ಹಲಸಿನಕಾಯಿ ಹಪ್ಪಳ, ಅಕ್ಕಿ ಹಪ್ಪಳಗಳು ಕೆಮು ಕೆಂಡದಲ್ಲಿ ಬೆಚ್ಚಗಾಗಿ ನಮ್ಮ ಬಾಯಿ ಸೇರುತ್ತಿದ್ದವು.ಅಮ್ಮ ಹಬ್ಬದಲ್ಲಿ ಮಾಡಿ ತುಂಬಿಟ್ಟ ಅತ್ರಸ, ಕಜ್ಜಾಯ ಚಕ್ಕುಲಿಗಳು ಸದ್ದಿಲ್ಲದೇ ಹೊಟ್ಟೆ ಸೇರುತ್ತಿದ್ದವು. ಮಳೆಯ ತಣ್ಣಗಿನ ಚಳಿಗೆ ಇಂತಹ ತಿಂಡಿಗಳೇ ನಮ್ಮ ಬೆಚ್ಚಗಿನ ಜೊತೆಗಾರ! ತಿಂಗಳಿಗೊಮ್ಮೆ ಅಪ್ಪ ತರುತ್ತಿದ್ದ ಶುಂಟಿ ಪೆಪ್ಪರಮೆಂಟು ಮಾತ್ರ ಆಗಿನ ನಮ್ಮ ಕ್ರಂಚು ಮಂಚು ಎಲ್ಲಾ!

ಅಪ್ಪ ಬುದ್ಧಿವಂತರು! ಸುಮಾರು ಎಂಟತ್ತು ಮಕ್ಕಳು ತುಂಬಿದ್ದ ಅವಿಭಕ್ತ ಕುಟುಂಬ ನಮ್ಮದು(ಈಗ ಇಲ್ಲ ಬಿಡಿ). ಅದಕ್ಕೆಂದೇ ಅಪ್ಪ ಶುಂಟಿ ಪೆಪ್ಪರಮೆಂಟು ತರ್ತಾ ಇದ್ದಿದ್ದು. (ಆಗ ಒಂದು ರುಪಾಯಿಗೆ ೨೦ ಪೆಪ್ಪರಮೆಂಟುಗಳು ಬರ್ತಾ ಇದ್ದವು!)  ಎಲ್ಲರಿಗೂ ಒಂದೊಂದು ಕೊಡ್ತಾ ಇದ್ದರು!



ಮಳೆಗಾಲವೆಂದರೆ ನನಗಂತೂ ಬಹಳ ಅಚ್ಚುಮೆಚ್ಚು. ನೀರಿನಲ್ಲಿ ಕುಣಿದು ಕುಪ್ಪಳಿಸಿ ಆಡಿದ ದಿನಗಳೇನು, ಬಿರುಮಳೆಯಲ್ಲಿ ಗಾಳಿಗೆ ಛತ್ರಿ ಹಾರಿ ಹೋದರೆ ಅಪ್ಪನ ಬೆತ್ತದ ಪೆಟ್ಟು ಬೀಳುವುದೆಂಬ ಭಯದಿಂದ ಶಾಲೆಯಿಂದ ಮನೆಯವರೆಗೂ ಎಂಟು ಕಿ. ಮೀ. ನಡೆದು ಬರುವಾಗ ದಿನಾ ನೆನೆದೇ ಸಾಗುವ ಕ್ಷಣಗಳೇನು? ಯಾವ ಶೀತ ಜ್ವರಗಳೂ ನಮ್ಮ ಹತ್ತಿರ ಸುಳಿಯುತ್ತಿರಲಿಲ್ಲ. ದಿನಾ ಶಾಲೆಗೇ ಹೋಗುವಾಗ ಹಲವಾರು ಹಳ್ಳ ಹೊಳೆಗಳನ್ನು ದಾಟಿ ಹೋಗುವ ಸಂದರ್ಭ ಅದೇನು ಖುಶಿ! ಒಮ್ಮೊಮ್ಮೆ ಎದೆಯವರೆಗೂ ತುಂಬಿ ರಭಸದಿಂದ ಹರಿವ ನೀರಿನಲ್ಲಿ ದಾಟಿ ಬರುತ್ತಿರಲಿಲ್ಲವೇ? ಮರದ ದಿಮ್ಮಿಯ ಸಾರವೋ ಅಥವಾ ಎರಡು ಮೂರು ಅಡಿಕೆ ಮರದಿಂದ ಮಾಡಿದ ಸಾರ(ಸಂಕ)ವೋ ಸುಲಲಿತವಾಗಿ ದಾಟುತ್ತಿರಲಿಲ್ಲವೇ? ಯಾವ ಮಕ್ಕಲಾದರೂ  ಹಳ್ಳ ಹೊಳೆಯಲ್ಲಿ ತೇಲಿ ಹೋದ ಪ್ರಸಂಗಗಳಿವೆಯೇ? ಯಾರೋ ಕೊಚ್ಚಿಹೋದ ಕತೆ ಇದೆಯೇ? ಇಡೀ ನಮ್ಮೂರಿನ ಇತಿಹಾಸದಲ್ಲಿ ಅಂತಹ ಪ್ರಸಂಗ ಇದುವರೆಗೂ ನಡೆದಿಲ್ಲ!



 ನಾವು ಆಗಾಗ ಕೇಳುತ್ತಿರುತ್ತೇವೆ. ಈಜಲು ಹೋದ ಬಾಲಕರು ನೀರುಪಾಲು, ಮಳೆಯ ರಭಸಕ್ಕೆ ಕೊಚ್ಚಿಹೋದ ಬಾಲಕ, ನದಿ ವಿಹಾರಕ್ಕೆ ಹೋದ ದಂಪತಿಗಳು ನೀರಿನಲ್ಲಿ ಕಾಲು ಜಾರಿ ಬಿದ್ದು ದುರ್ಮರಣ! ಇದೆಲ್ಲಾ ನಗರ ಪೇಟೆಗಳಲ್ಲಿ ಹುಟ್ಟಿ ಬೆಳೆದವರ ದುರಾದೃಷ್ಟ! ಅರ್ಧ ಜಾಯಮಾನವನ್ನು ನೀರಿನಲ್ಲೇ ಕಳೆಯುವ ಒಬ್ಬ ಮಲೆನಾಡಿಗ ನೀರಿನಲ್ಲಿ ಆಕಸ್ಮಿಕ ಅಂತ್ಯಕಂಡ ಉದಾಹರಣೆ ಒಂದಾದರು ಇವೆಯಾ?  ನಾನು ಇದುವರೆಗೆ ಕೇಳಿಲ್ಲ!

ಕಂಪ್ಯೂಟರ್, ಟ್ಯುಶನ್, ಸ್ಕೂಲು, ಹೋಂ ವರ್ಕು ಅಂತ ಸದಾ ನಿರತರಾಗುವ ಪೇಟೆಯ ಮಕ್ಕಳಿಗೆ ಮಲೆನಾಡಿನ ಹಳ್ಳಿಯ ಸುಖದ ಕಲ್ಪನೆ ಇದೆಯಾ? ಒಮ್ಮೆ ಆ ರುಚಿ ಹತ್ತಿದರೆ ಎಂದೆಂದೂ ಬಿಡಲಾರರು. ಏನಂತೀರಾ?

ಅದಕ್ಕೆ ಆದಷ್ಟು ಬೇಗ ಊರಿಗೆ ಹೊರಡಲು ಯೋಚಿಸುತ್ತಿದ್ದೇನೆ. ಅಮ್ಮ ಒಂದಿಷ್ಟು ಹಲಸಿನ ಬೀಜಗಳನ್ನು ಸಂಗ್ರಹಿಸಿ ಇಟ್ಟಿದ್ದಾಳೆ. ತಮ್ಮ ಮುರುಗನ ಹುಳಿಯನ್ನು ಒಟ್ಟು ಮಾಡಿದ್ದಾನೆ. ಹುಳಿ  ಸಿಪ್ಪೆ ಅವನಿಗೆ ಮಾರಲು, ಅದರ ಬೀಜ ಎಣ್ಣೆ ತೆಗೆಯಲು! ಮನೆ ಖರ್ಚಿಗೆ ಇದೇ ಎಣ್ಣೆ ನಾವು ಉಪಯೋಗಿಸುವುದು! ನನ್ನ ಮುದ್ದಿನ ಬಂಗಾರಿ (ನಾನು ಹಾಲುಂಡು ಬೆಳೆದ ಗೌರಿಯ ಮರಿಮಗಳು!) ಕರು ಹಾಕಿದೆ. ಅದರ ಜೊತೆಗೇ ಮಂಗಳಾ ಕೂಡಾ ಮುದ್ದಾದ ಹೆಣ್ಣು ಕರುವಿನ ತಾಯಿಯಾಗಿದ್ದಾಳಂತೆ! ಅಮ್ಮ ಈಗಿಂದಲೇ ನನಗಾಗಿ ತುಪ್ಪ ಸಂಗ್ರಹಿಸುತ್ತಿದ್ದಾರಂತೆ.

ನನ್ನದೊಂದು ಅಭ್ಯಾಸ ಇದೆ ಗೊತ್ತಾ?

ಅದೇನಪ್ಪಾ ಅಂದ್ರೆ................

ನಗಬಾರದು ಮತ್ತೆ............!

ನಾನು ಸಣ್ಣವನಿದ್ದಾಗ ನನ್ನ ಅಜ್ಜಿ ಕಲಿಸಿದ್ದು!



ಅಜ್ಜಿ ಹಾಲು ಕರೆಯುವಾಗ ನನ್ನನ್ನು ಕೊಟ್ಟಿಗೆಗೆ ಕರೆದು ಆಗಷ್ಟೇ ಕರೆದ  ಬಿಸಿ ಬಿಸಿ ನೊರೆ ಹಾಲನ್ನು ಕುಡಿಸುತ್ತಿದ್ದಳು! ಮಾವ ನೋಡಿದರೆ ಬಯ್ಯುವ ಭಯದಿಂದ!  ಆ ಬೆಚ್ಚಗಿನ ನೊರೆಹಾಲ ರುಚಿ ಕಂಡುಕೊಂಡ ನಾನು ಮುಂದೇ ನಾನೇ ಹಾಲು ಕರೆಯುವ ನೆಪವೊಡ್ಡಿ ನೇರವಾಗಿ ಗೌರಿಯ ಕೆಚ್ಚಲಿಗೆ ಬಾಯಿ ಹಾಕುತ್ತಿದ್ದೆ! ಎಷ್ಟಾದರೂ ಅವಳು ನನ್ನ ತಾಯಿ ಅಲ್ವಾ? ಆ ಅಭ್ಯಾಸ ಈಗಲೂ ಮುಂದುವರೆದಿದೆ. ಮನೆಗೆ ಹೋದರೆ ದನದ ಹಾಲು ಕರೆಯುವುದು ನಾನೇ, ನಾನು ಹಾಲು ಕರೆದರೆ ಅಮ್ಮ ಏನಂತಾರೆ ಗೊತ್ತಾ? "ಪವಿ, ಯಾಕೋ ನೀನು ಹಾಲು ಕರೆದರೆ ಕಡಿಮೆ ಹಾಲು ಕೊಡ್ತಾವೆ ದನಗಳು. ಪರಿಚಯ ಆಗದೆ ಹೀಗೆ ಮಾಡ್ತಾವಾ?" ಅಂತ!  ಮುಂದಿನದ್ದು ನಿಮಗೆ ಅರ್ಥ ಆಯ್ತಲ್ವಾ? ಪಾಪ ಅಮ್ಮನಿಗೆಲ್ಲಿ ಗೊತ್ತು ಮಗನ ಕಲ್ಯಾಣ ಗುಣ!
ಈ ಗುಟ್ಟನ್ನು ಎಲ್ಲಾದರು ಅಮ್ಮನಿಗೆ ಹೇಳೀರಾ  ಕೊನೆಗೆ, ಆಮೇಲೆ ಕೊಟ್ಟಿಗೆಗೆ ಪ್ರವೇಶ ನಿಷೇಧವಾಗುತ್ತದೆ!

44 comments:

  1. ರಸವತ್ತಾಗಿದೆ ನಿಮ್ಮ ಬರಹ. ಕೊನೆಯಲ್ಲಿ ನಿಜವಾಗಿಯೂ ನಾನು ನಗಲಿಲ್ಲ..

    ಹಹಹಹಹಹಹೊಹೊಹೊಹೊ..:)

    ReplyDelete
  2. ಅಲ್ಲಾ ರೀ ಗೆಣಸು,ಹಲಸಿನ ಬೀಜ ಅಂತ ನಮ್ಮ ಬಾಯಲ್ಲಿ ನೀರು ಬರ್ಸಿದ್ರಲ್ಲ. ತುಂಬಾ ಚನ್ನಾಗಿದೆ ಡೆಲ್ಲಿ ಮಳೆಯಲ್ಲಿ ನಿಂತು ಊರ ಮಳೆಯ,ನಿಸರ್ಗದ ನೆನಪುಗಳನ್ನ ನಿಮ್ಮ ಬೊಗಸೆಯಲ್ಲಿ ಹಿಡಿದು ನಮಗೆ ನೀಡಿರುವಿರಿ...ಧನ್ಯವಾದಗಳು
    -- Day dreamer

    ReplyDelete
  3. ಮಲೆನಾಡಿನ ಮಧ್ಯೆ ಇರುವ ನಮಗೆ ವಾರಗಟ್ಟಲೆ ಸೂರ್ಯನನ್ನು ಕಾಣದೆ ಕಿರಿಕಿರಿ!ದೂರದ ದೆಹಲಿಯಲ್ಲಿ ನಿಮಗೆ ಮಳೆಯ ಕನವರಿಕೆ!ಇದುವೇಜೀವನ!ಅಲ್ಲವೇ?

    ReplyDelete
  4. ತುಂಬಾ ಆಪ್ತವಾಗಿ ಮಳೆಯೊಂದಿಗಿನ ತಮ್ಮ ಬಾಲ್ಯದಿನದ ಸವಿನೆನಪುಗಳನ್ನು ಮೆಲುಕಾಡಿಸಿದ್ದಿರಾ...
    ಇಗಲೂ....ಇದು ಯಾಕೋ ಅತೀ ಆಯ್ತು ಅಲ್ಲವೇ...
    ಚೆದದ ಲೇಖನ!

    ReplyDelete
  5. ನಮಸ್ಕಾರ. ಈ ಕಾಮೆಂಟ್ ಬರಿತಾ ಇರೋ ಈ ಸಮಯದಲ್ಲಿ ಇಲ್ಲಿ (ಕೊಪ್ಪಾದ ಪಕ್ಕ ಒಂದು ಚಿಕ್ಕ ಹಳ್ಳಿ)ಕತ್ತಲೆಗಟ್ಟಿ ಧೋ ಎಂದು ಮಳೆ ಸುರಿತಾ ಇದೆ!!!
    ಒಳ್ಳೇ ಲೇಖನ.
    ಇದನ್ನು ಓದಿದ ಮೇಲೆ ಒಂದು ಘಟನೆ ಜ್ಞಾಪಕಕ್ಕೆ ಬರುತ್ತೆ-(ಕೊಡೆ ತರದೆ) ಬಯಲು ಸೀಮೆಯಿಂದ ಶೃಂಗೇರಿಗೆ ಬಂದಿಳಿದ ಯಾವನೋ ಒಬ್ಬ ಯಾವುದೋ ಕಂಪನಿಯ ಟಿ.ವಿ ನೋ ಏನೋ ಸರ್ವೀಸ್ ಮಾಡುವವನು ನಮ್ಮ ನೆಂಟರ ಅಂಗಡಿಯ ಜಗಲಿಗೆ ಹಾರಿ ಮಳೆ ಬೀಳುವುದನ್ನು ಪಿಳಿ ಪಿಳಿ ನೋಡುತ್ತಾ 'ಈ ಮಳೆ ಯಾವಾಗ್ ಬಿಡುತ್ತೇನೋ' ಅಂತ ಗೊಣಗುಟ್ಟಿದಾಗ ನಮ್ಮ ನೆಂಟರು 'ಇನ್ನೇನ್ ಒಂದೆರಡ್ ತಿಂಗ್ಳು' ಅಂದಾಗ ಅವನು ಸುಸ್ತು!!!

    ReplyDelete
  6. ನಿಜ ದೆಹಲಿಯ ಬಿಸಿ ಚುರ್ ಎನಿಸುವಂತಹದು ನಮಗೂ ಬಿಸಿಲಿನ ಅನುಭವವಿದೆ. ಅಂತೆಯೇ ನೀವು ಊರಿಗೆ ಹೋಗಿಬರುವ ಆಸೆಯಲ್ಲಿದ್ದೀರಿ ಹೋಗಿ ಬನ್ನಿ.........ಹೊಸ ಕರುವನ್ನು ಕಂಡು ಹಾಲಿನಿಂದ ಗಿಣ್ಣು ಮಾಡಿಸಿಕೊಂಡು ತಿಂದು ಬನ್ನಿ, ತುಪ್ಪ ಶೇಖರಣೆ ಜೋರಾಗೆ ಸಾಗಿರಬೇಕು......ಎಷ್ಟೆ ಆಗಲಿ ಅಮ್ಮ ಅಲ್ಲವೆ ಮಗನ ಬಗ್ಗೆ ಕಾಳಜಿ ಜಾಸ್ತಿ ಹಹಹ...
    ನಿಮ್ಮ ಕಲ್ಯಾಣ ಗುಣವನ್ನು ಯಾರಿಗೂ ಹೇಳುವುದಿಲ್ಲ!!!!!!!!! ಬ್ಲಾಗ್ನಲ್ಲಿ ಬಿತ್ತರಿಸಿದ್ದನ್ನು ಅಮ್ಮನಿಗಿ ತೋರಿಸಬೇಡಿ ಹಾಹಹ

    ReplyDelete
  7. ಪ್ರವೀಣ್,
    ಮಲೆನಾಡನ್ನು ಸುಂದರವಾಗಿ ವರ್ಣಿಸಿದ್ದೀರ.....ನಾನು ಎಲ್ಲವನ್ನು ಅನುಭವಿಸಿಲ್ಲ....ಕೆಲವೆ ಕೆಲವು ಮಾತ್ರ....ಆದರೆ ಎಲ್ಲವನ್ನು ನೋಡಿದ್ದೆ ಅಷ್ಟೇ....
    ಸುಂದರ ವಿವರಣೆ....
    ಬೇಗ ಊರಿಗೆ ಹೋಗಿ....ನಿಮ್ಮ ಮುದ್ದಿನ ಬಂಗಾರಿ ಕಾಯುತ್ತಿದೆ....

    ReplyDelete
  8. ಚೆನ್ನಾಗಿ ನೆನಪಿಸಿಕೊ೦ಡಿದ್ದೀರಿ ಮಲೆನಾಡ ಮಳೆಗಾಲವನ್ನು...
    ಈಗಲ್ಲಿ ಜೋರು ಮಳೆಯ೦ತೆ.. ಅಡಿಕೆಗೆ ಔಷಧಿ ಹಾಕಲೂ ಪುರುಸೊತ್ತು ಕಡದ ಹಾಗೆ....

    ReplyDelete
  9. ತುಂಬ ಸುಂದರ ಬರಹ ... ಮಲೆನಾಡಿನಲ್ಲಿ ಕಳೆದ ಬಾಲ್ಯದ ನೆನಪು ಸದಾ ಹಸಿರು .

    ReplyDelete
  10. ನಮ್ಮೂರಲ್ಲೂ ಒಳ್ಳೆ ಮಳೆ ಬರ್ತಾ ಇದೆ. ನಿಮ್ಮ ಲೇಖನ ಓದಿ ಅರ್ಜೆಂಟ್ ಆಗಿ ಊರಿಗೆ ಹೋಗಬೇಕು ಅಂತ ಅನ್ನಿಸ್ತಾ ಇದೆ. :)

    ReplyDelete
  11. ಡೆಲ್ಲಿಯನೆಲ್ಲಿ ಇಲ್ಲಿನದಲ್ಲಿ
    ಪ್ರವೀಣರಿಗಾಯ್ತು ನೆನಪು
    ಇರೋದು ಡೆಲ್ಲಿ ನೆನೆಸಿದ್ದು ಇಲ್ಲಿನ ಗಲ್ಲಿ
    ಚನ್ನಾಗಿದೆ ನಿಮ್ಮ ಮಾತುಗಳ ವರಸೆ....

    ReplyDelete
  12. ಪ್ರವೀಣ,
    ಕೆಚ್ಚಲಿಗೇ ಬಾಯಿ ಹಚ್ಚಿ ನೊರೆಹಾಲು ಕುಡಿದ ನೀವೇ ಅದೃಷ್ಟವಂತರು! ಮನೆಗೆ ಹೋಗಿ
    enjoy ಮಾಡಿ ಬನ್ನಿ, ಎಂದು ಹಾರೈಸುತ್ತೇನೆ.

    ReplyDelete
  13. ಸುಬ್ರಮಣ್ಯ ಸರ್,
    ಹ್ಹ ಹ್ಹ ಹ್ಹಾ............
    ನಿಮ್ಮಲ್ಲಿ ನಗುವಿಗೆ ಬೇರೆ ಏನಂತಾರೆ?
    ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  14. Day dreamer,
    ಮಲೆನಾಡ ಮಳೆಯ ಸೊಬಗೇ ಹಾಗೆ ಅಲ್ವಾ? ಮೂರು ತಿಂಗಳು ಬಿಡದೆ ಚಟಪಟ ಸುರಿವ ಮಳೆ ಮಲೆನಾಡ ಸೌಂದರ್ಯದ ಗುಟ್ಟು.
    ಧನ್ಯವಾದಗಳು.

    ReplyDelete
  15. ಡಾಕ್ಟ್ರೆ,
    ನಿಮ್ಮ ಮಾತು ನಿಜ, ಅದಕ್ಕೆ ಇರಬೇಕು 'ಇರುವುದೆಲ್ಲವ ಬಿಟ್ಟು ಇಲ್ಲದಿರುವುದರೆಡೆಗೆ ತುಡಿಯುವುದೇ ಜೀವನ' ಎಂದು ಹಿರಿಯರು ಹೇಳಿದ್ದು!
    ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  16. ಸೀತಾರಾಂ ಸರ್,
    ಪ್ರತಿಕ್ರಿಯೆಗೆ ಧನ್ಯವಾದಗಳು.
    ಆದರೆ ಯಾವುದು ಅತಿಯಾಗಿದ್ದು ಅಂತ ಗೊತ್ತಾಗ್ಲಿಲ್ಲ!

    ReplyDelete
  17. ಸುಬ್ರಮಣ್ಯ ಸರ್,
    ನಿಜ, ಮಲೆನಾಡ ಮಳೆಯ ವೈಭವವನ್ನು ಬಯಲು ಸೀಮೆಯ ಜನ ನೋಡಿ ದಂಗಾಗುವುದರಲ್ಲಿ ಅತಿಶಯವೇನಿಲ್ಲ!
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  18. ಮನಸು,

    ಆದಷ್ಟು ಬೇಗ ಊರಿಗೆ ಹೊರಡುತ್ತೇನೆ. ನೀವು ಹೇಳಿದ ಎಲ್ಲಾ ಖುಶಿಗಳನ್ನು ಅನುಭವಿಸುತ್ತೇನೆ.
    ಪ್ರತಿಕ್ರಿಯೆಗೆ ಧನ್ಯವಾದಗಳು. ಹೀಗೆ ಆಗಾಗ ಬರ್ತಾ ಇರಿ.

    ReplyDelete
  19. ಮಹೇಶ್ ಸರ್,
    ಮಲೆನಾಡ ಅನುಭವಗೆ ಬಲು ಸುಂದರ.........
    ಧನ್ಯವಾದಗಳು ಪ್ರತಿಕ್ರಿಯೆಗೆ. ಖಂಡಿತಾ ಬೇಗ ಹೋಗ್ತೇನೆ!

    ReplyDelete
  20. ವಿಜಯಶ್ರೀ ಮೇಡಂ,
    ಹೌದು, ತಡವಾಗಿ ಶುರುವಾದರೂ ಮಳೆ ಚನ್ನಾಗೇ ಆಗ್ತಾ ಇದೆ,
    ಧನ್ಯವಾದಗಳು.

    ReplyDelete
  21. ಸುಮಾ ಅವರೇ,
    ಬಾಲ್ಯದ ಸವಿನೆನಪುಗಳು ಎಂದಿಗೂ ಮರೆಯಲಾಗದ ಸುಂದರ ಚಿತ್ರಗಳು.
    ಧನ್ಯವಾದಗಳು. ಪ್ರತಿಕ್ರಿಯೆಗೆ.

    ReplyDelete
  22. ಬಾಲೂ ಅವರೇ,
    ಇನ್ಯಾಕೆ ತಡ, ಹೋಗಿ ಬನ್ನಿ. ಮಲೆನಾಡ ಸುಂದರ ವೈಭವವನ್ನು ಅನುಭವಿಸಿ.
    ಧನ್ಯವಾದಗಳು. ಹೀಗೆ ಆಗಾಗ ಬರ್ತಾ ಇರಿ.

    ReplyDelete
  23. ಅಜಾದ್ ಸರ್,
    ಏನ್ಮಾಡೋಣ ಹೇಳಿ, ಬಾಲ್ಯದ ಆ ಸವಿನೆನಪುಗಳು ಇಂದಿಗೂ ಕಾಡುತ್ತಿರುತ್ತವೆ. ಅದರಲ್ಲೂ ಸುಂದರ ಪ್ರಕೃತಿ ಸೊಬಗನ್ನು ಮರೆಯಲು ಸಾಧ್ಯವೇ?
    ಧನ್ಯವಾದಗಳು.

    ReplyDelete
  24. ಸುನಾಥ್ ಸರ್,
    ಅದೇನೋ ಗೊತ್ತಿಲ್ಲ, ಚಿಕ್ಕವನಿದ್ದಾಗ ನನ್ನ ಎರಡನೇ ತಾಯಿ ಗೌರಿಯೊಂದಿಗೆ ಬೆಳೆದ ನಂಟು ಈಗಲೂ ಮುಂದುವರೆದಿದೆ.
    ಮನೆಯಲ್ಲಿ ಬೆಳಿಗ್ಗೆ ಎದ್ದ ಕೂಡಲೇ ಅಮ್ಮನಿಗೆ ಕೇಳಲು ಶುರು ಮಾಡ್ತೇನೆ" ಅಮ್ಮಾ, ಹಾಲು ಕರ್ಕೊಂಡು ಬರ್ಲಾ" ಅಂತ!
    ಹ್ಹ ಹ್ಹ ಹ್ಹಾ.....
    ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.

    ReplyDelete
  25. ಯಾಕೆ ನಿಮಗೆ ಬೇಸರ
    ಬರದಿರುವೆನೆ ಆ ಥರ
    ನೆಟ್ಟಿನಲ್ಲಿ ಡೊಂಬರ
    ನನಗಾಗಿದೆ ಕಾಲದ ಬರ
    ನೆಟ್ಟು ಬೇಗ ಸರಿಬರ
    ಬಿಡಲು ನನಗೆ ಮುಜುಗರ

    ಅರ್ಥ್ವಾಗಿರಬಹುದಲ್ಲ,ಇನು ಮೇಲೆ ನೋಡಿ ನಾಳೆ-ನಾಡಿದ್ದು ಇಂದ ದಿನಾ ಬ್ಲಾಗ್ ತಿರುಗಾತ್ ಜೋರು! ನಿಮ್ಮ 'ಗೌರಿ ಹಬ್ಬ' ಚೆನ್ನಾಗಿದೆ, ಗಣಪ ಕದ್ದು ಹಾಲುಕುಡಿಯುವುದು ಸಂತಸ ತಂದಿದೆ, ಹಾಲು ಕಮ್ಮಿಯಾದರೆ ಹರಕೆ ಹೊರಲು ಹೇಳಿ. 'ಕಳ್ಳ ಗಣಪ' ಸ್ವಲ್ಪ ಕರುಣೆ ತೋರಿ ಹಾಲು ಕದಿಯುವುದು ಕಮ್ಮಿ ಆದರೆ ಆಗ ಹರಕೆ ಫಲಿಸುತ್ತದೆ, ಚೆನ್ನಾಗಿದೆ ಪ್ರವೀಣ್, ಮಳೆಗಾಲ, ನಿಮ್ಮ ಲೇಖನ ಎಲ್ಲೋ ನನಗೆ ಊರಲ್ಲೇ ಇರುವ ಅನುಭವ ಆಯ್ತು.

    ReplyDelete
  26. ಪ್ರವೀಣ್,
    ತುಂಬಾ ಚೆನ್ನಾಗಿ ಬರೆದಿದ್ದೀರಾ...... ಹೇಳಿದ ರೀತಿ ಚೆನ್ನಾಗಿತ್ತು ನಿಮ್ಮ ಕಲ್ಯಾಣ ಗುಣ..... ಕೊನೆಯಲ್ಲಿ ನಗೆ ಬರಲೇ ಇಲ್ಲಾರಿ.... ಬಿದ್ದು ಬಿದ್ದು ನಕ್ಕೆ.....

    ReplyDelete
  27. ಮಳೆ ಯಾವಾಗಲೂ ಆಪ್ತ ಭಾವನೆ ತರಿಸುತ್ತದೆ. ಮಲೆನಾಡಿನ ಮಳೆಯ ಸೊಗಸೇ ಬೇರೆ

    ReplyDelete
  28. ಮನದಾಳದಿಂದ............ ,
    ಹೌದು ಜಾಯಮಾನವೆಲ್ಲ ಹಾಗೆ ಕಳೆಯುವ ಆಸೆ ಯಾರಿಗೆ ಆಗುವುದಿಲ್ಲ ಹೇಳಿ?
    ತುಂಬಾ ಮಸ್ತಾಗಿದೆ.. ನಿಮ್ಮ ನೆನಪಹನಿಗಳು..

    ReplyDelete
  29. ವಿ ಆರ್ ಬಿ ಸರ್,
    ತಾಂತ್ರಿಕ ತೊಂದರೆಗಳು ಬೇಗ ಸುಧಾರಿಸಿ ನಿಮ್ಮ ತಿರುಗಾಟ ಜೋರಾಗಲಿ!
    ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  30. ಶಿವಪ್ರಕಾಶ್,
    thanks for your valuable comment...........
    keep visit.

    ReplyDelete
  31. ದಿನಕರ್ ಸರ್,
    ಕೊನೆಯಲ್ಲಿ ನಗಲಿಲ್ಲ ಅಂತ ನನಗೇನು ಬೇಜಾರಿಲ್ಲ, ಬರೀ ಗಹಗಹಿಸಿದ್ರಲ್ಲಾ!
    ಧನ್ಯವಾದಗಳು ಪ್ರತಿಕ್ರಿಯೆಗೆ.

    ReplyDelete
  32. ಜ್ಞಾನಾರ್ಪಣಾಮಸ್ತು
    ಮಲೆನಾಡ ಸುಂದರ ಪ್ರಕೃತಿಯ ಮಡಿಲಲ್ಲಿ ದಿನ ಕಳೆಯುವ ಆಸೆ ಈಗಲೇ ಆಗ್ತಾ ಇದೆ.
    ಧನ್ಯವಾದಗಳು ನಿಮ್ಮ ಅಮೂಲ್ಯವಾದ ಪ್ರತಿಕ್ರಿಯೆಗೆ.

    ReplyDelete
  33. ವಸಂತ್,
    ನಿಮ್ಮ ಆಗಮನ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು.
    ಅರೋಗ್ಯ ಕೈಕೊಟ್ಟ ಕಾರಣ ನಿಮ್ಮ ಬ್ಲಾಗ್ ಕಡೆ ಬರಲಾಗಲಿಲ್ಲ. ದಯವಿಟ್ಟು ಕ್ಷಮಿಸಿ.

    ReplyDelete
  34. ದೀಪಸ್ಮಿತ ಅವರೇ,
    ಬಹಳ ದಿನಗಳ ನಂತರ ಇತ್ತ ಬಂದಿದ್ದೀರಾ. ಧನ್ಯವಾದಗಳು.
    ಖಂಡಿತ ಹೌದು. ಮಲೆನಾಡ ಮಳೆಯ ಬಗ್ಗೆ ನಾವೆಷ್ಟೇ ಬರೆದರೂ ಆ ಸೊಬಗಿನ ಮುಂದೇ ನಾವೆಲ್ಲಾ ಕುಬ್ಜರೇ!

    ReplyDelete
  35. ಪ್ರವೀಣ್ ಅವರೆ...
    ಖರೆ ಖರೆ, ನಾ ನಗಲಿಲ್ಲ... ಬೇಕಾದರೆ ನಾಗರಾಜ್ ಗೆ ಕೇಳಿ.. :-)
    ಬಾಲ್ಯದ ನೆನಪುಗಳು, ಎಷ್ಟೊಂದು ಮಧುರ.... ಅಮರ...

    ReplyDelete
  36. ಪ್ರವೀಣ್ ಅವರೆ...
    ಖರೆ ಖರೆ, ನಾ ನಗಲಿಲ್ಲ... ಬೇಕಾದರೆ ನಾಗರಾಜ್ ಗೆ ಕೇಳಿ.. :-)
    ಬಾಲ್ಯದ ನೆನಪುಗಳು, ಎಷ್ಟೊಂದು ಮಧುರ.... ಅಮರ...

    ReplyDelete
  37. ಪ್ರವೀಣ್ ಸರ್,

    ತುಂಬಾ ಉತ್ತಮ ಲೇಖನ...ಓದಿ ಕುಶಿ ಆಯಿತು....ನಿಮ್ಮ ಆರೋಗ್ಯ ಈಗ ಹೇಗಿದೆ???

    ReplyDelete
  38. ಅನಿಲ್ ಸರ್,
    ಬಾಲ್ಯದ ನೆನಪುಗಳು ಎಂದೆಂದೂ ನಿರಂತರ, ನವಚೇತನದ ಆಗರ.........
    ಧನ್ಯವಾದಗಳು.

    ReplyDelete
  39. ಅಶೋಕ್ ಸರ್,
    ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.
    ಆರೋಗ್ಯ ಈಗ ಪರವಾಗಿಲ್ಲ, ಸುಧಾರಣೆಯ ಹಂತದಲ್ಲಿದೆ.

    ReplyDelete
  40. mane haagu office naduve haadu hoguvaaga maleyaaguttiddare maatra nannantaha mysoorigarige maleya sinchana. onderadu hani bidda takshana dikkiyalli itta rain coat tegedu uttukondu jamm anta scooter prayaana. 5 nimisha maleyalli nendarantoo adho-gati, 2-3 dina hushaaru tapputte. aadare nimma ee post odi nanagoo maleyalli neneyo aaseyaagtaa ide. Thanks for this beautiful post.

    ReplyDelete
  41. Raghu Dharmendra,
    welcome my blog.........
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,
    ಮಳೆಯಲ್ಲಿ ನೆನೆದರೆ ಜ್ವರ ಬರುತ್ತೇನೋ ಅನ್ನೋ ಭಯವೇ ಹುಶಾರಿಲ್ಲದಿರಲು ಮುಖ್ಯ ಕಾರಣ!
    ಒಮ್ಮೆ ಹೆದರಿಕೆ ಬಿಟ್ಟು ಮಳೆಯ ತುಂತುರು ಹನಿಗಳಿಗೆ ನಿಮ್ಮ ಮುಖ ಕೊಟ್ಟು ನೋಡಿ..........
    ಆ ಸುಖ ಅನುಭವಿಸಿ,
    keep visit.......

    ReplyDelete
  42. ನೆನಪುಗಳು ಹಾಗೆ ಹಳಸದ ಹಣ್ಣಿನ ಹಾಗೆ :)
    ತುಂಬಾ ಚಂದದ ಬರಹ
    ನಿಮ್ಮ ಈ ಬರಹದಿಂದ ತುಂಬಾ ನೆನಪಾಯ್ತು ನನ್ನ ಬಾಲ್ಯ



    http://manjukaraguvamunna.blogspot.com/

    ReplyDelete
  43. ನಗು ಮಾತ್ರಾ ಬರಲಿಲ್ಲ..ಹ್ಹಾ..... ಹ್ಹಾ........ ಹ್ಹಾ......... ಹ್ಹಾ.......... ಹ್ಹಾ...........
    ನಾನು ಒಂದಿನ ತೇಲಿ ಹೊಗಿದ್ದೆ, ಮಲೆನಾಡಿನ ಮಳೆಯಲ್ಲಿ. Next time ಯಾರು ತೇಲೊಗಿಲ್ಲ ಅಂತ ಹೇಳುವ ಹಾಗಿಲ್ಲ.

    ReplyDelete