ಶೇಷ ಶಯನನೆ, ಪಾಪ
ಯಾವಾಗಲೂ ಶೇಷನ ಮೇಲೆ
ಮಲಗುವೆಯಲ್ಲಾ, ಒಮ್ಮೆ ಯೋಚಿಸು
ಅದಕೂ ಜೀವವಿಲ್ಲವೇನೋ?
ಇಷ್ಟೆಲ್ಲಾ ತರತರದ
ಹಾಸಿಗೆ ಮಂಚಗಳಿರುವಾಗ
ಅದೇನು ಹೇಸಿಗೆ ಹಾವೇ ಹಾಸಿಗೆ
ಅದರ ಮೇಲೆ ಕರುಣೆ ಇಲ್ಲವೇನೋ?
ಲಕ್ಷ್ಮಿಯ ಕೈ ನೋಯದೇನೋ
ಒತ್ತಿ ಒತ್ತಿ ನಿನ್ನ ಕಾಲ
ನಾಲ್ಕು ದಿವಸ ರಜೆ
ಅವಳಿಗೂ ಕೊಡಬಾರದೇನೋ?
ಅಲ್ಲಲ್ಲಿ ನೋಡಲ್ಲಿ ಕಾಣಿಸದೆ
ಪಾರ್ಲರುಗಳು ಮಸ್ಸಾಜು
ಸೆಂಟರುಗಳು ಈ ಕಾಲದಲ್ಲೂ
ಅವಳಿಗೆ ಸುಖ ಬೇಡವೇನೋ?
ವಾಕಿಂಗು ಜಾಗಿಂಗು ರನ್ನಿಂಗು
ಒಂದೂ ಇಲ್ಲದೆ ಹಾಗೆ ಇರುವೆಯಲ್ಲಾ
ಬೊಜ್ಜು ಬಂದರೆ ಲಕುಮಿ
ಸಿಡುಕುವುದಿಲ್ಲವೇನೋ?
ಸಾಗರವ ಬಿಟ್ಟು ಭುವಿಗಿಳಿದು ಬಾ
ಇಲ್ಲಿ ಮೈದಾನವಿಲ್ಲ ರಸ್ತೆಯಲ್ಲೇ
ಜಾಗಿಂಗು ವಾಕಿಂಗು ಮಾಡಿ
ಜಿಮ್ಮುಗಳಲ್ಲಿ ಮೆಂಬರ್ ಆಗ್ಬಾರದೇನೋ?
ಬ್ರಹ್ಮನನು ನಾಭಿಯ
ಕಮಲದ ಮೇಲೆ ಕೂರಿಸಿಕೊಂಡೆ,
ನಿನ್ನೊಂದಿಗೆ ಏಕಾಂಗಿತನ
ಲಕುಮಿಗೆ ಬೇಡವೇನೋ?
ಸಿಂಗಲ್ ಫ್ಲೋರಿನ ಫ್ಲಾಟಲ್ಲಿ
ಲಕುಮಿಯೊಂದಿಗೆ ಸಂಸಾರ
ಮಾಡಿ ಮಾಡರ್ನ್ ಹರಿ
ನೀನಾಗಬಾರದೇನೋ?
ಸರ್ಕಾರಿ ಕೆಲಸವೂ ಸಿಗಬಹುದು
ಪ್ರೈವೆಟಲ್ಲೂ ದುಡ್ಡಿದೆ
ಏನೂ ಇಲ್ಲದಿದ್ದರೆ
ರಾಜಕೀಯ ನೀ ಮಾಡಬಾರದೇನೋ?
(ಲಕ್ಷ್ಮಿವೆಂಕಟರಮಣನಲ್ಲಿ ಕ್ಷಮೆ ಕೋರಿ...........)

