Sunday, January 17, 2010

"ಅಮ್ಮ, ಅಳಬೇಡಮ್ಮಾ"


ಇದು ನನ್ನ ಮೊದಲ ಕಥೆ.
ಕಥೆ ಹುಟ್ಟಿಕೊಂಡ ರೀತಿ ಬಲು ವಿಚಿತ್ರ! ರಾತ್ರಿ ನಿದ್ರೆಯಿಂದ ಒಮ್ಮೆಲೇ ಎಚ್ಚರವಾಯಿತು. ಕಣ್ಣಮುಂದೆ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಬಿಕ್ಷೆ ಬೇಡುವವರ ಚಿತ್ರಣ ಹಾದು ಹೋಯ್ತು. ತಕ್ಷಣ ಪೆನ್ನು, ಪೇಪರಿಗೆ ಕೆಲಸ ಕೊಟ್ಟೇಬಿಟ್ಟೆ!
ಅದನ್ನು ನಿಮ್ಮ ಮುಂದೆ ಇಡುತಿದ್ದೇನೆ




"ಅಮ್ಮ, ಅಳಬೇಡಮ್ಮಾ"


ಆಹಾಹಾ! ತುಂಭಾ ಚಳಿ! ದೆಹಲಿಯ ಚಳಿಗಾಲ ಅಂದ್ರೆ ದೇಹ ಮರಗಟ್ಟಿ ಹೋಗುತ್ತದೆ. ಹೀಗೆ ಯೋಚಿಸುತ್ತಾ ರಸ್ತೆ ಬದಿಯಲ್ಲಿದ್ದ ಗೂಡಂಗಡಿಯತ್ತ ತೆರಳಿದೆ. ನನ್ನನ್ನು ನೋಡಿದ ಅಂಗಡಿಯಾತ ಬಿಸಿಬಿಸಿ ಟೀ, ಒಂದು ಸಿಗರೇಟನ್ನು ತೆಗೆದು ಕೊಟ್ಟ.ದಿನಾ ಬೆಳಿಗ್ಗೆ ಆಫೀಸ್ಸಿಗೆ ಹೋಗುವಾಗ ದಾರಿಯಲ್ಲಿ ಸಿಗುವ ಈ ಅಂಗಡಿಯ ಬದಿಯಲ್ಲಿ ಬೈಕ್ ನಿಲ್ಲಿಸಿ ಸಿಗರೇಟು, ಟೀ ಕುಡಿದು ಹೋಗುತ್ತೇನೆ. ಹೊಟ್ಟೆಯೊಳಗೆ ಬಿಸಿ ಸೇರಿದಂತೆ ಒಂದು ರೀತಿಯ ಉಲ್ಲಾಸ!

ಟೀ ಕುಡಿಯುತ್ತಾ ರಸ್ತೆಯ ಆ ಬದಿ ನೋಡುತ್ತಿದ್ದೇನೆ, ಅರೆ! ಅದೇನದು? ಮತ್ತದೇ ದೃಶ್ಯ! ದಿನಂಪ್ರತಿ ನಡೆಯುವಂತೆ ಇಂದು ಕೂಡ ನಡೆಯುತ್ತಿದೆ. ಒಬ್ಬ ಗಂಡಸು, ಬಟ್ಟೆಯಲ್ಲಾ ಕೊಳಕಾಗಿದೆ. ಸ್ನಾನ ಮಾಡದೇ ಅದೆಷ್ಟು ದಿನಗಳಾಗಿವೆಯೋ? ಆತ ಒಂದು ಮಧ್ಯ ವಯಸ್ಕ ಹೆಗಸಿಗೆ ಹೊಡೆಯುತ್ತಿದ್ದಾನೆ. ಬಹುಶಃ ಆಕೆ ಆತನ ಹೆಂಡತಿ ಇರಬೇಕು. ಪಶುವಿಗೆ ಹೊಡೆದಂತೆ ಬಡಿಯುತ್ತಿದ್ದಾನೆ. ಪಾಪ! ಚಿಕ್ಕ ಮಗುವೊಂದು ಆ ದೃಶ್ಯವನ್ನು ನೋಡಲಾರದೆ ಜೋರಾಗಿ ಅಳುತ್ತಿದೆ.ಆಗ ಸ್ವಲ್ಪ ದೊಡ್ಡದಾದ ಹುಡುಗನೊಬ್ಬ ಆ ಮಗುವನ್ನು ಎತ್ತಿಕೊಂಡು ಸಂತಯ್ಸತೊಡಗಿದ. ಆ ಮಗುವಿನ ಅಣ್ಣನಿರಬೇಕು, ಆತನಿಗೆ 9-10 ವರ್ಷವಿರಬಹುದು. "ಅಪ್ಪ ಬಿಡಪ್ಪ, ಅಮ್ಮನಿಗೆ ಹೊಡೆಯಬೇಡ, ಸಂಜೆ ದುಡ್ಡು ತಂದು ಕೊಡುತ್ತೇನೆ." ಎಂದು ಹೇಳಿ ಅವನಪ್ಪನನ್ನು ಎಳೆದಾಡತೊಡಗಿದ.

ಆತ ಆ ಹುಡುಗನನ್ನು ಕೆಂಗಣ್ಣಿನಿಂದ ದುರುಗುಟ್ಟಿ ನೋಡುತ್ತಾ, ಹೆಂಡತಿಗೆ ಹೊಡೆಯುವುದನ್ನು ನಿಲ್ಲಿಸಿದ. "ಇನ್ನೊಂದು ಘಂಟೆಯಲ್ಲಿ ದುಡ್ಡು ತಂದು ಕೊಡದಿದ್ದರೆ ನಿನ್ನನ್ನು ಉಳಿಸುವುದಿಲ್ಲ, ಕೊಂದೇ ಹಾಕುತ್ತೇನೆ" ಎಂದು ಜೋರಾಗಿ ಕೂಗುತ್ತಾ ಎತ್ತಲೋ ಹೊರಟು ಹೋದ.

ಆ ಹೆಂಗಸು ತನ್ನಿಬ್ಬರು ಮಕ್ಕಳನ್ನು ತಬ್ಬಿಕೊಂಡು ಜೋರಾಗಿ ಅಳುತ್ತಿದ್ದಾಳೆ. ಯಾರು ಆಕೆಯನ್ನು ಸಮದಾನಗೊಳಿಸುವವರು? ಎಲ್ಲರಿಗೂ ಅದೊಂದು ಮನರಂಜನೆ ಮಾತ್ರ. ಆಕೆಯ ಬದುಕಿನ ಹೋರಾಟ ಯಾರಿಗೂ ಅರ್ಥವಾಗುವುದಿಲ್ಲ. ನಮಗೇಕೆ ಇಲ್ಲದ ಉಸಾಬರಿ. ಇದು ಈ ಬಿಕ್ಷುಕರ ದಿನನಿತ್ಯದ ಗೋಳು ಎಂಬ ತಾತ್ಸಾರ ಭಾವ ಎಲ್ಲರಲ್ಲೂ ತುಂಬಿದೆ.

ಸಾದಾರಣವಾಗಿ ದೆಹಲಿಯಂತ ನಗರಗಳಲ್ಲಿ ಈ ದೃಶ್ಯ ಸಾಮಾನ್ಯ. ಇವರು ಟ್ರಾಫಿಕ್ ಸಿಗ್ನಲ್ ಗಳಲ್ಲಿ ಬಿಕ್ಷೆ ಬೇಡಿ ಜೀವನ ಸಾಗಿಸುವ ನಿರ್ಗತಿಕರು. ಇವರಿಗೆ ವಾಸಕ್ಕೆ ಮನೆಯಿಲ್ಲ. ಹಾಕಲು ಬಟ್ಟೆಬರಿಗಲಿಲ್ಲ, ವಿಧ್ಯೆ-ಬುದ್ಧಿಗಳನ್ನಂತೂ ಕೇಳುವುದೇ ಬೇಡ. ಭಿಕ್ಷೆ ಬೇಡಿ ಬಂದ ಹಣವೆಲ್ಲ ಗಂಡಸರ ಕುಡಿತದಂತ ಚಟಗಳಿಗೆ ಸರಿಯಾಗುತ್ತದೆ. ಯಾರಾದರೂ ಏನಾದರೂ ತಿನ್ನಲು ಕೊಟ್ಟರೆ ಇವರ ಹೊಟ್ಟೆ ತುಂಬುತ್ತದೆ. ಇಲ್ಲದಿದ್ದರೆ ಇಲ್ಲ!

ಕುಡಿದು ಬಂದ ಗಂಡಸರು ಹೆಂಡತಿ-ಮಕ್ಕಳಿಗೆ ಹೊಡೆಯುವ ದೃಶ್ಯ ಇಲ್ಲಿ ಸಾಮಾನ್ಯ. ಯಾಕೋ ಇಂದು ನನ್ನ ಕಣ್ಣ ಮುಂದೆ ಆ ಭಿಕ್ಷುಕಿ ಬಿಕ್ಕಳಿಸುತ್ತಿರುವ ದೃಶ್ಯವೇ ಕಾಣಿಸುತ್ತಿತ್ತು. ಮನಸ್ಸೇಕೋ ಕಸಿವಿಸಿಗೊಂಡಿತ್ತು. ಮನಸ್ಸಿಲ್ಲದ ಮನಸ್ಸಿನಿಂದ ಕೆಲಸ ಮುಗಿಸಿ ಮನೆಯತ್ತ ಹೊರಟೆ.

ರಸ್ತೆಯಲ್ಲಿ ಹೋಗುತ್ತಿರುವಾಗ ಅದೇ ಜಾಗದಲ್ಲಿ ಜನರ ಗುಂಪು ಸೇರಿದೆ. ಬೈಕ್ ನಿಲ್ಲಿಸಿ ಜನಜಂಗುಳಿಯಲ್ಲಿ ದಾರಿ ಮಾಡಿಕೊಂಡು ಮುಂದೆ ಹೋಗಿ ಅಲ್ಲಿನ ದೃಶ್ಯವನ್ನು ನೋಡಿ ಮೂಕವಿಸ್ಮಿತನಾದೆ!

ಆ ಹೆಂಗಸು ಇಬ್ಬರು ಮಕ್ಕಳನ್ನು ತಬ್ಬಿಕೊಂಡು ಬಿಕ್ಕುತ್ತಿದ್ದಾಳೆ. ಹುಡುಗನ ಮೈ ರಕ್ತಸಿಕ್ತವಾಗಿದೆ. ಸ್ವಲ್ಪ ದೂರದಲ್ಲಿ ರಕ್ತದಿಂದ ತೋಯ್ದು ಹೋದ ದೇಹವೊಂದು ಬಿದ್ದಿದೆ. ಅದು ಆ ಕುಡುಕ ಬಿಕ್ಸುಕನದ್ದೆ ಎಂದು ತಿಳಿಯಲು ತಡವಾಗಲಿಲ್ಲ. ಆ ಜಾಗದಲ್ಲಿ ನಿಲ್ಲಲಾರದೆ ಗೂಡಂಗಡಿಗೆ ಹೋಗಿ ಸಿಗರೇಟ್ ಹತ್ತಿಸಿಕೊಂಡು ಅಂಗಡಿಯಾತನತ್ತ ಪ್ರಶ್ನಾರ್ತಕವಾಗಿ ನೋಡಿದೆ. ಅಂಗಡಿಯಾತ ಹೇಳಿದ ಕತೆಯನ್ನು ಕೇಳಿ ನನ್ನಿಂದ ಮಾತುಗಳೇ ಹೊರಡಲಿಲ್ಲ!

ಸ್ವಲ್ಪ ಸಮಯದ ಮೊದಲು ಆತ ಮತ್ತೆ ಅಲ್ಲಿಗೆ ಬಂದಿದ್ದ. ಬಂದವನೇ ಜೋರಾಗಿ ಕೂಗತೊಡಗಿದ. ಎಲ್ಲಿ ದುಡ್ಡು ಕೊಡು ಎಂದು ಹೆಂಡತಿಗೆ ಹೊಡೆಯುತಿದ್ದ.ಅಲ್ಲೇ ಇದ್ದ ಆ ಹುಡುಗ ಇದನ್ನು ನೋಡಿ ಸಹಿಸಿಕೊಳ್ಳಲು ಆಗದೆ ರೋಷದಿಂದ ತಂದೆಯತ್ತ ನುಗ್ಗಿದ. ಪಕ್ಕದಲ್ಲೇ ಇದ್ದ ಚಾಕುವಿನಿಂದ ತನ್ನ ತಂದೆಗೆ ಇರಿದೇ ಬಿಟ್ಟ!
ಅವೆಶಗೊಂದವನಂತೆ ಎಲ್ಲೆಂದರಲ್ಲಿ ಇರಿಯತೊಡಗಿದ.ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಇಷ್ಟೆಲ್ಲಾ ನಡೆದು ಹೋಗಿತ್ತು! ತನ್ನ ತಾಯಿಗೆ ಆಗುತ್ತಿರುವ ಹಿಂಸೆಯನ್ನು ನೋಡಲಾರದೆ, ತಾಯಿಯ ಮೇಲಿನ ಪ್ರೀತಿಯಿಂದ ತಂದೆಯನ್ನೇ ಕೊಂದು ಮುಗಿಸಿದ್ದ ಆ ಮಗ!

ಆ ಕ್ಷಣದಲ್ಲಿ ಹುಡುಗನ ಮನಸ್ಸು ಏನು ಯೋಚಿಸಿತ್ತು? ಈಗಲೂ ಆತನ ಮುಖದಲ್ಲಿ ಯಾವುದೇ ಚಿಂತೆ ಕಾಣಿಸುತ್ತಿಲ್ಲ. ಭಾರವಾದ ನಿಟ್ಟುಸಿರು ಚೆಲ್ಲುತ್ತಾ ಮನೆಯ ದಾರಿ ಹಿಡಿದೆ. ನನ್ನ ಕಿವಿಯಲ್ಲಿ ಆ ಹುಡುಗನ ಧ್ವನಿ ಪದೇ ಪದೇ ಕೇಳಿಸುತಿತ್ತು.
"ಅಮ್ಮಾ, ಅಳಬೇಡಮ್ಮಾ!"

2 comments:

  1. Hi
    Good and heart touching story and you have narrated it very well.

    ReplyDelete