Tuesday, January 19, 2010

"ನನ್ನ ಕುಂದಾದ್ರಿ ಬೆಟ್ಟದ ಪ್ರವಾಸ"

ರಾತ್ರಿ ಮಲಗುವಾಗ ಏನೋ ಚಡಪಡಿಕೆ!
ಯಾವಾಗ ಬೆಳಗಾಗುತ್ತದೆ? ಎಷ್ಟು ಹೊತ್ತಿಗೆ ಕುಂದಾದ್ರಿ ಗುಡ್ಡ ನೋಡುತ್ತೇನೆ ಅಂತ ಕಾತರ!
ಇನ್ನೊಂದೆಡೆ ಮಾವನ ಭಯ! ಅವನಿಗೆ ಗೊತ್ತಾದ್ರೆ ಬೆತ್ತ ಹುಡಿಯಾಗುತ್ತದೆ. ಮಲಗುವ ಮುನ್ನ ಅಜ್ಜಿಗೆ ಗುಟ್ಟಾಗಿ ಹೇಳಿದ್ದೆ. ಮೊದಲು ಬೇಡ ಅಂದ್ರೂ ನನ್ನ ಹಟಕ್ಕೆ ಕೊನೆಗೂ ಒಪ್ಪಿಕೊಂಡಳು. ಮಾವನಿಗೆ ಹೇಳಬೇಡ ಎಂದು ಹೇಳುವುದನ್ನು ಮರೆಯಲಿಲ್ಲ!
ಶಾಲೆ ಇನ್ನು ಕೆಲವೇ ದಿನಗಳಲ್ಲಿ ಮುಗಿಯುವುದರಿಂದ ಸ್ನೇಹಿತರೆಲ್ಲರೂ ಎಲ್ಲಾದರೂ ಪಿಕ್ನಿಕ್ ಹೋಗುವ ಯೋಚನೆ ಮಾಡಿದ್ದೆವು. ಕುಂದಾದ್ರಿಯೇ ಸರಿ ಎಂದು ತೀರ್ಮಾನಿಸಿ, ನಾಳೆಯೇ ಹೋಗುವುದು ಎಂದು ನಿರ್ದರಿಸಿದ್ದೆವು. ನಾನು, ಕಾಂತರಾಜ, ರಶ್ಮಿ, ದೀಪಿಕಾ, ಅನಿತಾ, ಸುಹಾಸ, ಗುರು ಪ್ರಸಾದ್, ಮತ್ತು ರಜನಿ ಹೀಗೆ ನಮ್ಮ ಗೆಳೆಯರ ಬಳಗ ತಯಾರಾಯಿತು.
ದಿನಾ ಗದ್ದೆಯಲ್ಲಿ ಹೋಗುವಾಗ ಕುಂದದ ಗುಡ್ಡವನ್ನು ನೋಡುತ್ತಾ ಹೋಗುತ್ತಿದ್ದೆ. ಆಗೆಲ್ಲಾ ಯಾವಾಗಲಾದರೂ ಅಲ್ಲಿಗೆ ಹೋಗಲೇಬೇಕು ಅಂತ ಅಂದುಕೊಂಡಿದ್ದೆ. ಆ ಅದೃಷ್ಟ ಇಂದು ಕೂಡಿ ಬಂದಿತ್ತು.
ಬೆಳಿಗ್ಗೆ ಹೊರಡುವಾಗ ಅಜ್ಜಿ ಕಡುಬು, ತುಪ್ಪ, ಬೆಲ್ಲ ಕಟ್ಟಿ ಕೊಟ್ಟಳು. ಅಜ್ಜಿಗೆ ಹೇಳಿ ಹೊರಟೆ.
ಮೊದಲೇ ನಿರ್ದರಿಸಿದಂತೆ ನಡಬೂರು ದೇವಸ್ಥಾನದ ಬಳಿ ಸೇರಿದೆವು. ಎಲ್ಲರೂ ಒಟ್ಟಿಗೆ ಪಾದಯಾತ್ರೆ ಹೊರಟೇ ಬಿಟ್ಟೆವು ನಮ್ಮ ಕನಸಿನ ಕುಂದಾದ್ರಿಗೆ! ಕಾನ್ತರಾಜನಿಗೆ ದಾರಿ ಗೊತ್ತಿತ್ತು.
ನಡಬೂರು, ಅರೇಹಳ್ಳಿ ಹಾಲ್ಗುಂದ ಮಾರ್ಗವಾಗಿ ಬೆಟ್ಟದ ಬುಡ ತಲುಪಿದೆವು. ಮಾರ್ಗ ಮದ್ಯದಲ್ಲಿ ಸಿಕ್ಕ ಮಾಲತಿ ನದಿಯಲ್ಲಿ ದಾಟಲು ಸೇತುವೆ ಇರಲಿಲ್ಲ. ಸರಿ, ಹೊಳೆ ದಾಟಿಯೇ ಹೊರಟೆವು. ಫೆಬ್ರವರಿ ತಿಂಗಳಾದ್ದರಿಂದ ಹೆಚ್ಚಿಗೆ ನೀರು ಇರಲಿಲ್ಲ.















ಮೇಲೆ ಹತ್ತಲು ಕಾಲು ದಾರಿ, ಕಾಂತ ಮುಂದೆ, ನಾವೆಲ್ಲಾ ಹಿಂದೆ. ಕಲ್ಲು-ಮುಳ್ಳಿನಿಂದ ಕೂಡಿದ ಕಡಿದಾದ ದಾರಿ. ಕೆಲೆವೆಡೆಯಂತೂ ತುಂಬಾ ಇಕ್ಕಟ್ಟಾದ, ಮತ್ತು ಕಠಿಣವಾದ ದಾರಿ. ನಮ್ಮೂರಿಗೆ ಅಷ್ಟೊಂದು ಮುದ್ದಾಗಿ ಕಾಣುವ ಗುಡ್ಡ, ಇಲ್ಲಿ ನೋಡಿದರೆ....? ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಮಾತು ಆಗ ನೆನಪಿಗೆ ಬಂದದ್ದು ಮಾತ್ರ ತಾತ್ಪರ್ಯವೇನಲ್ಲ!
ಮಾರ್ಗ ಮಧ್ಯದಲ್ಲಿ ಪಾಳು ಬಿದ್ದ ಜೈನ ಬಸದಿಯೊಂದಿತ್ತು. ಕಲ್ಲುಗಳೆಲ್ಲ ಬಿದ್ದಿದ್ದವು, ಮಂಟಪದ ಕಂಬಗಳು ಮಾತ್ರ ನಿಂತಿದ್ದವು. ಅಷ್ಟರಲ್ಲೇ ಕಾಂತ ಕೂಗಿದ,
"ಇಲ್ಲಿ ನೋಡಿ, ಭೀಮನ ಹೆಜ್ಜೆ ಗುರುತು!"
ದೊಡ್ಡ ಕಲ್ಲು ಬಂಡೆಯ ಮೇಲೆ ಒಂದು ಜೊತೆ ಹೆಜ್ಜೆ ಗುರುತು ಮೂಡಿತ್ತು. ಪಾಂಡವರ ವನವಾಸ ಸಂದರ್ಭದಲ್ಲಿ ಇಲ್ಲಿಗೆ ಬಂದಾಗ ಭೀಮನ ಹೆಜ್ಜೆಯ ಗುರುತು ಇಲ್ಲಿ ಬಿದ್ದಿತ್ತು ಎಂಬ ಮಾತಿದೆ.
ಸರಿ, ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತು ವಿಶ್ರಮಿಸಿಕೊಂಡೆವು. ದಟ್ಟವಾದ ಕಾಡು, ಹಕ್ಕಿಗಳ ಚಿಲಿಪಿಲಿ, ತಣ್ಣಗೆ ಬೀಸುವ ತಂಗಾಳಿ ನಮ್ಮ ಮನಸೂರೆಗೊಂಡಿತ್ತು. ಎಂದೂ ಇಂತ ಸ್ಥಳಗಳಿಗೆ ಬರದಿದ್ದ ದೀಪಿಕಾ ಮಾತ್ರ ಖುಷಿಯಲ್ಲಿ ಕುಣಿದಾಡಿದಳು!
ಅಲ್ಲಿಂದ ಮುಂದೆ ದಾರಿ ಇನ್ನೂ ಕಠಿಣ! ಕಡಿದಾದ ಬಂಡೆಯ ಮೇಲೆ ಹತ್ತಬೇಕು. ಜೀವವನ್ನು ಎಡಗೈನಲ್ಲಿ ಹಿಡಿದುಕೊಂಡು ಇದ್ದಬದ್ದ ದೈರ್ಯವನ್ನೆಲ್ಲ ಒಟ್ಟುಗೂಡಿಸಿ ಹತ್ತತೊಡಗಿದೆವು!


ಅಂತೂ ಇಂತೂ ಗುಡ್ಡದ ತುದಿ ತಲುಪಿದೆವು. ಅರ್ದ ಘಂಟೆ ಕುಳಿತಲ್ಲಿಂದ ಏಳಲೇ ಇಲ್ಲ! ಹಳ್ಳಿಯ ರೈತಕುಟುಂಬದಲ್ಲಿ ಹುಟ್ಟಿ ಬೆಳೆದ ನಮಗೆ ಏನೂ ಅನ್ನಿಸಲಿಲ್ಲ. ಆದರೆ, ಪೇಟೆಯಲ್ಲಿಯೇ ಹುಟ್ಟಿ, ನಡೆಯುವುದು ಅಂದ್ರೆ ಏನೆಂದೇ ಅರಿಯದ ದೀಪಿಕಾ, ಗುರು ಪ್ರಸಾದ್ ಬೆವತು ಹೋಗಿದ್ದರು! ಅವರಿಬ್ಬರ ಪರಿಸ್ಥಿತಿ ಹೇಳಲು ಸಾಧ್ಯವೇ ಇಲ್ಲ!


ಅಲ್ಲಿಂದ ಕಾಣುವ ಮನಮೋಹಕ ದೃಶ್ಯವನ್ನು ಹೇಳಲು ಮಾತುಗಳೇ ಸಾಲದು! ಸುತ್ತಲೂ ಹಸಿರು ಹೊದ್ದ ಭೂಮಾತೆ, ಬಳುಕುತ್ತಾ ಸಾಗಿರುವ ಮಾಲತಿ ನದಿ, ನಾಲೂರು ಹೊಳೆ, ದೂರದಲ್ಲಿ ಸಮುದ್ರದಂತೆ ಕಾಣುವ ವಾರಾಹಿ ಡ್ಯಾಮ್, ಹಸಿರಿನ ಮಧ್ಯೆ ಕಾಣುವ ಗದ್ದೆ ಬಯಲುಗಳು, ಅಲ್ಲಿ ಇರುವೆಗಳಂತೆ ಕಾಣುತ್ತಿರುವ ದನಗಳು, ದೊಡ್ಡದಾದ ಹೆಬ್ಬಾವು ಮಲಗಿದಂತೆ ಕಾಣಿಸುವ ಆಗುಂಬೆ-ತೀರ್ಥಹಳ್ಳಿ ರಸ್ತೆ, ಹೊಸಗದ್ದೆ-ಗುಡ್ಡೆಕೇರಿ ರಸ್ತೆ, ನಲುರು ಸಾಹುಕಾರರ ಮನೆಯ ಅಡಿಕೆ ಚಪ್ಪರ! ಇದೆಲ್ಲವನ್ನು ನೋಡಿ ಹುಚ್ಚೆದ್ದು ಕುಣಿದೆವು!


ಬೆಟ್ಟದ ಮೇಲೆ ಸುಮಾರು ಹದಿನೇಳನೆ ಶತಮಾನದಲ್ಲಿ ಜೈನ ಮುನಿ ಕುಂದಕುಂದಾಚಾರ್ಯರು ನೆಲೆಸಿದ್ದರು. ಅವರು ಪದ್ಮಾವತಿ ದೇವಿ, ಪಾರ್ಶ್ವನಾಥ ಗುಡಿಯನ್ನು ನಿರ್ಮಿಸಿ, ಅಲ್ಲೇ ತಪಸ್ಸು ಮಾಡುತಿದ್ದರು.



















ಇಲ್ಲಿ ಒಂದು ದೊಡ್ಡದಾದ, ಒಂದು ಚಿಕ್ಕದಾದ ಕಮಲದ ಕೊಳಗಳಿದ್ದು, ವರ್ಷ ಪೂರ್ತಿ ನೀರು ಅದರಲ್ಲಿ ನೀರು ಇರುವುದನ್ನು ನೋಡಬಹುದು.













ದೇವಾಲಯದ ಬಲಬಾಗದಲ್ಲಿ ಅತ್ಯಂತ ಕಡಿದಾದ ಬಂಡೆಯಿದೆ.
ಇಲ್ಲಿನ ಸೂರ್ಯಾಸ್ತ ಮತ್ತು ಸೂರ್ಯೋದಯದ ದೃಶ್ಯ ತುಂಬಾ ಮನಮನೋಹಕವಾಗಿರುತ್ತದೆ.









ಮುಂಬಾಗದಲ್ಲಿ ಬಯಲು ಪ್ರದೇಶವಿದೆ. ಸುಮಾರು ವರ್ಷಗಳ ಹಿಂದೆ ಈ ದೇವಾಲಯದ ಪೂಜಾರಿ ಬೆಟ್ಟದ ಮೇಲೆ ವಾಸಿಸುತ್ತಿದ್ದರು! ಅವರು ಇದೆ ಬಯಲಿನಲ್ಲಿ ಮೆಣಸು, ಟೊಮೇಟೊ, ಬೆಂಡೆ, ಮುಂತಾದ ತರಕಾರಿಗಳನ್ನು ಬೆಳೆಯುತಿದ್ದರು! ನಮ್ಮ ಮನೆಯಲ್ಲಿ ಅತ್ಯಂತ ದೊಡ್ಡದಾದ ಟೊಮೇಟೊ ಬೆಳೆದರೆ "ಕುಂದದ ಗುಡ್ಡದ ಬಟ್ರು ಹಿತ್ಲಲ್ಲಿ ಬೆಳೆದಷ್ಟು ದೊಡ್ಡ ಇದೆ" ಎಂದು ಅಜ್ಜಿ ಆಗಾಗ ಹೇಳುತ್ತಿದ್ದಳು. ಅಷೊಂದು ದೊಡ್ಡ ಗಾತ್ರದ ತರಕಾರಿಗಳನ್ನು ಯಾರೂ ನೋಡಿರಲಿಲ್ಲವಂತೆ!
ಈಗ ಅಲ್ಲಿ ಯಾರು ವಾಸಿಸುವುದಿಲ್ಲ. ಕೆಳಗೆ ಕುಂದಾದ್ರಿಯಿಂದ ದಿನಾ ಪೂಜಾರಿಗಳು ಬಂದು ಪೂಜೆ ಮಾಡಿ ಹೋಗುತ್ತಾರೆ. ಪ್ರತೀ ವರ್ಷ ಮಕರ ಸಂಕ್ರಾಂತಿಯ ದಿನದಂದು ವಿಶೇಷ ಪೂಜೆ, ಜಾತ್ರೆ ಇರುತ್ತದೆ. ಸುತ್ತಮುತ್ತಲಿನ ಊರುಗಳಿಂದ ಎಲ್ಲಾ ಜಾತಿಯ ಜನರೂ ಬಂದು ಪೂಜೆ ಸಲ್ಲಿಸುತ್ತಾರೆ!
ಗುಡ್ಡದ ಮೇಲೆ ಉಳಿದುಕೊಳ್ಳಲು ಕರ್ನಾಟಕ ಟೂರಿಸಂ ವ್ಯವಸ್ಥೆ ಮಾಡಿತ್ತು. ಆದರೆ ವಸತಿಗೃಹದ ಕಿಟಕಿ ಬಾಗಿಲುಗಳು ಕಾಣದಂತೆ ಕಳ್ಳಕಾಕರ ಪಾಲಾದದ್ದು ಮಾತ್ರ ನಾಚಿಕೆಗೇಡಿನ ಸಂಗತಿ!
ಈಗಂತೂ ಗುಡ್ಡದ ಮೇಲಿನವರೆಗೂ ರಸ್ತೆಯ ವ್ಯವಸ್ತೆಯಾಗಿದೆ. ವಾಹನಗಳು ನೇರವಾಗಿ ತುದಿ ತಲುಪಬಹುದು.
ಗುಡ್ಡಕ್ಕೆ ಹೋಗುವಾಗ ಗುಂಪಾಗಿ ಹೋಗುವುದು ಒಳ್ಳೆಯದು. ಒಬ್ಬರು-ಇಬ್ಬರು ಹೋಗಲು ಸ್ವಲ್ಪ ಭಯವಾಗುತ್ತದೆ.
ತೀರ್ಥಹಳ್ಳಿಯಿಂದ 30 km ದೂರ ಇರುವ ಇಲ್ಲಿಗೆ ಬರಲು ಹಲವಾರು ರಸ್ತೆಗಳಿವೆ. ತೀರ್ಥಹಳ್ಳಿಯಿಂದ ಆಗುಂಬೆ ಮಾರ್ಗದಲ್ಲಿ ಬಂದು, ಗುಡ್ದೆಕೆರಿಯಿಂದ ಹೊಸಗದ್ದೆ ಮಾರ್ಗವಾಗಿ ಹೋದರೆ ಕುಂದಾದ್ರಿ ಸರ್ಕಲ್ ಸಿಗುತ್ತದೆ.
ಶೃಂಗೇರಿಯಿಂದ ಬಂದರೆ ಆಗುಂಬೆ ರಸ್ತೆಯಲ್ಲಿ ಬಂದು, ಹೊಸ್ಗದ್ದೆಯಿಂದ ಗುಡ್ದೆಕೆರಿ ಮಾರ್ಗವಾಗಿ ಕುಂದಾದ್ರಿ ಸರ್ಕಲ್ ಸೇರುವುದು
ಆಗುಂಬೆಯಿಂದ ಬಂದರೆ ಶೃಂಗೇರಿ ಮಾರ್ಗದಲ್ಲಿ ಬಂದು ಹೊಸ್ಗದ್ದೆಯಿಂದ ಕುಂದಾದ್ರಿ ಸೇರುವುದು.
 ಅಲ್ಲಿಂದ ಗುಡ್ಡಕ್ಕೆ ಹೋಗಲು ಮೂರು ಆಯ್ಕೆಗಳಿವೆ.
ಮೊದಲನೆಯದು ವಾಹನಗಳ ಮೂಲಕ ಬೆಟ್ಟ ತಲುಪುವುದು,
ಎರಡನೆಯದು ರಸ್ತೆಯಲ್ಲಿ ನಡೆದು ಹೋಗುವುದು,
ಮೂರನೆಯದು ಕಾಡುದಾರಿಯ ಮೂಲಕ ಹೋಗುವುದು.















ಚಾರಣಿಗರಿಗೆ ಮೂರನೇ ಆಯ್ಕೆ ಒಳ್ಳೆಯದು. ನೀವು ಹೋದ ಸಮಯದಲ್ಲಿ ಪೂಜಾರಿಗಳು ಮನೆಯಲ್ಲೇ ಇದ್ದಾರೆ ನೀವು ಹೇಳಿದ ಮಾರ್ಗದಲ್ಲಿ ನಿಮ್ಮನ್ನು ಕರೆದುಕೊಂಡು ಹೋಗುತ್ತಾರೆ!
ಪ್ರಕೃತಿ ಸೌಂದರ್ಯದ ಸವಿಯನ್ನು ಸವಿಯುತ್ತ, ಮನೆಯಿಂದ ತಂಡ ಕಡುಬು ತುಪ್ಪ ತಿಂದು ಮನೆಯತ್ತ ಹೊರಟೆವು. ಸೂರ್ಯಾಸ್ತದ ಸೊಬಗನ್ನು ನೋಡಲು ಆಗಲೇ ಇಲ್ಲ!



ನೀವು ಹೋಗಿ ಬನ್ನಿ ಒಮ್ಮೆ ಕುಂದಾದ್ರಿ ಬೆಟ್ಟಕ್ಕೆ. ಅನುಭವಿಸಿ ಪ್ರಕೃತಿಯ ಸೊಬಗ.
ತಿನ್ನಲು, ಕುಡಿಯಲು ತೆಗೆದುಕೊಂಡು ಹೋಗಿ.
ನಿಮ್ಮಲ್ಲೊಂದು ಬೇಡಿಕೆ ಏನಂದ್ರೆ ಪ್ಲಾಸ್ಟಿಕ್ ಅಲ್ಲೇ ಎಸೆದು ಬರಬೇಡಿ, ಬೆಂಕಿ ಹಚ್ಚಿ ಕಾಡಿನ ಸಂಪತ್ತನ್ನು ನಾಶ ಮಾಡಬೇಡಿ.


ನಿಮ್ಮವ ಪ್ರವಿ

No comments:

Post a Comment