ಎಲ್ಲರೂ ನಗ್ತಿದ್ದಾರೆ,
ನಾನೂ ನಗತೊಡಗಿದೆ. ಎಲ್ಲರೂ ನಗುವಾಗ ನಾನ್ಯಾಕೆ ಸುಮ್ನಿರಲಿ? ನಮ್ಮ ಗಂಟೇನು ಹೋಗಲ್ವಲ್ಲ ನಕ್ಕರೆ!
ಕಾರಣ ಹೇಗಿದ್ರೂ ಆಮೇಲೆ ಗೊತ್ತಾಗುತ್ತೆ!
ಎಲ್ಲರ ದೃಷ್ಟಿ ನನ್ನತ್ತಲೇ ನೆಟ್ಟಿದೆ. ನನ್ನನ್ನೇ ನೋಡಿ ನಗುತ್ತಿದ್ದಾರೆ!
" ಏ ಪೈ, ಮುಂಡೆಗಂಡ ಕುರ್ದೆ...! ನಿನ್ನ ಚಡ್ಡಿ ಬಿದ್ದು ಹೋಗ್ಯದಲ್ಲೋ.......! ನಿನ್ನ ಮ್ಯಾಣೆ ತಿರ್ಪಾ.... ಹೆಂಗೆ ದುಂಡಗೆ ನಿತ್ತಾನೆ ನೋಡು"
ಎಲ್ಲರ ನಗುವಿಗೆ ಕಾರಣ ನನ್ನ ಚಡ್ಡಿ ಬಿದ್ದು ಹೋಗಿ ಉಚಿತ ದರ್ಶನ ಆಗಿದ್ದು ಎಂದು ತಿಳಿಯುವ ಹೊತ್ತಿಗೆ ನನ್ನ ಅರ್ಧ ಮಾನ -ಮರ್ಯಾದೆ ಹೋಗಿಯಾಗಿತ್ತು! ಸ್ವಲ್ಪವಾದರೂ ಉಳಿಯಲಿ ಅಂತ ಬೇಗ ಬೇಗ ಚಡ್ಡಿ ಏರಿಸಿಕೊಂಡೆ!
ಗುಂಡಿ ಕಿತ್ತುಹೊಗಿದ್ದ ಚಡ್ಡಿ ಕೆಳಗೆ ಜಾರಿತ್ತು. ಹಾಳಾದ ಉಡಿದಾರ ಬೇರೆ ಅವತ್ತೇ ಕಿತ್ತು ಹೋಗಬೇಕಿತ್ತಾ? ಈಗ ಏನು ಮಾಡೋದು? ಒಂದು ಕೈಯ್ಯಲ್ಲಿ ಚಡ್ಡಿ ಹಿಡ್ಕೊಂಡು ಹೋಗಲು ಸಾಧ್ಯವಿಲ್ಲ. ದೈನ್ಯದಿಂದ ರಮೆಶಣ್ಣನ ಕಡೆ ನೋಡಿದೆ.
ನನ್ನ ಕಳೆಗುಂದಿದ ಮುಖಾರವಿಂದವ ನೋಡಿ ರಮೇಶಣ್ಣನಿಗೆ ಅರ್ಥವಾಯಿತೇನೋ? ಅಲ್ಲಿ ಇಲ್ಲಿ ಹುಡುಕಿ ಒಂದು ಬಳ್ಳಿ ಕಿತ್ತು ತಂದು ನನ್ನ ಸೊಂಟಕ್ಕೆ ಕಟ್ಟಿದ. ಇನ್ನು ನಾನು ತೆಗೆಯುವವರೆಗೆ ಚಡ್ಡಿ ಬಿದ್ದು ಹೋಗುವುದಿಲ್ಲ ಎಂಬ ದೃಡವಾದ ನಂಬಿಕೆಯೊಂದಿಗೆ ಎಲ್ಲರ ಹಿಂದೆ ಹೊರಟೆ! ನನ್ನ ಚಡ್ಡಿ ಪ್ರಸಂಗ ಎಲ್ಲರ ಬಾಯಲ್ಲೂ ಎಲೆ ಅಡಿಕೆ ರಸದಂತೆ ಕೆಂಪಾಗಿ ಹೋಗಿತ್ತು. ಥೂ ಹಾಳಾದ ಚಡ್ಡಿ! ನನ್ನ ಮರ್ಯಾದೆ ಎಲ್ಲಾ ತೆಗೆಸಿತು. ನಾಳೆಯಿಂದ ಈ ಚಡ್ಡಿ ಮುಟ್ಟೋದೇ ಇಲ್ಲ! ಹೀಗೊಂದು ಶಪಥ ನನ್ನ ಮನದಲ್ಲಿ ಮೂಡಿ ಮರೆಯಾಯಿತು!
ಅಂತೂ ಇಂತೂ ಹಳು ಸೋಯುವ ಕಾರ್ಯ ಶುರುವಾಯಿತು. ನಾನು ರಮೆಶಣ್ಣನ ಬೆನ್ನು ಬಿಡಲೇ ಇಲ್ಲ. ಎಷ್ಟಾದರೂ ನನ್ನ ಮರ್ಯಾದೆ ಕಾಪಾದಿದವನಲ್ವಾ? ಎಲೆ ಅಡಿಕೆಯ ಆಸೆ ಬೇರೆ! ಅದು ಬೇರೆ ಮಕ್ಕಳು ದೊಡ್ಡವರ ಜೊತೆಗೇ ಇರಬೇಕೆಂಬ ನಿಯಮ ಇದೆಯಲ್ಲ! ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅದು ಕ್ಷೇಮವಾಗಿತ್ತು.
ಹೀಡ್ಕಾ..... ಹೀಡ್ಕಾ...........
ಕ್ರೂ.......... ಕ್ರೂ..............
ಹಿಡ್ಡಿಡ್ದೋ.............
ಕೂಗಾಟ ಚೀರಾಟ ಕಾಡಿನ ಪ್ರಶಾಂತತೆಯ ಸಾಗರವನ್ನು ಕಲಕಿತು. ಸಣ್ಣ ಪುಟ್ಟ ಪ್ರಾಣಿ ಪಕ್ಷಿಗಳೆಲ್ಲ ಭಯಗೊಂಡು ಓಡಿದವು. ಮರದ ಮೇಲಿದ್ದ ನಮ್ಮ ಪೂರ್ವಜರಿಗೆ ಮಾತ್ರ ಯಾವುದೇ ಭಯ ಆದಂತೆ ಕಾಣಲಿಲ್ಲ! ಆಗಾಗ ಹಳ್ಳಿಗೂ ಬರುತ್ತಿದ್ದ ಮಂಗಗಳಿಗೆ ನಮ್ಮ ಕೂಗಾಟ ಹಾರಾಟ ಸಾಮಾನ್ಯ ಸಂಗತಿಯೇನೋ ಎಂಬಂತೆ ತಮ್ಮ ಚಟುವಟಿಕೆಗಳಲ್ಲಿ ತೊಡಗಿದ್ದವು!
ಕಾಡಿನ ತುಂಬಾ ಕೂಗಾಟ ಮುಗಿಲು ಮುಟ್ಟಿತು. ಕೋಲಿನಿಂದ ಬಡಿಯುತ್ತಾ ಕಲ್ಲು ಹೊಡೆಯುತ್ತಾ ಮುನ್ನುಗ್ಗತೊದಗಿದೆವು.
ಸೂರ್ಯ ನೆತ್ತಿಗೆ ಬಂದಾಗಿತ್ತು. ಇಷ್ಟು ದೂರ ಬಂದರೂ ಒಂದೂ ಪ್ರಾಣಿಯಾ ಸದ್ದೇ ಇಲ್ಲ! ದಿನಾ ರಾತ್ರಿ ಬಾಳೆತೋಟಕ್ಕೋ ಕಬ್ಬಿಣ ಗದ್ದೆಗೋ ಬಂದು ಲೂಟಿ ಮಾಡುವ ಹಂದಿಗಳು ಎಲ್ಲಿ ಹೋದವು? ಅಲ್ಲಲ್ಲಿ ಆಗೊಮ್ಮೆ ಈಗೊಮ್ಮೆ ಮಿಂಚಿ ಮರೆಯಾಗುವ ಕಡಗಳೆಲ್ಲಿ ಹೋದವು? ಕೊನೆಗೊಂದು ಕುರಿಯೂ ಸಿಗಲಿಲ್ವಲ್ಲ ಛೆ!
ಯಾರೋ ಕೂಗಿದ್ದು ಕೇಳಿ ತಟ್ಟನೆ ಯೋಚನೆಗೆ ಲಗಾಮು ಹಾಕಿ ಒಕ್ಕೊರಲಿಂದ ಎಲ್ಲರೂ ಮತ್ತೆ ಕೂಗತೋಡಗಿದೆವು! ಆದರೆ ನಾವ್ಯಾರೂ ಹಂದಿ ನೋಡಲಿಲ್ಲ, ಅದು ಓಡಿದ ಸದ್ದೂ ಕೇಳಲಿಲ್ಲ! ಆದರೆ ಮೊದಲು ಕೂಗಿದವನ ಮೇಲೆ ಅಚಲ ನಂಬಿಕೆ! ಪತಿ-ಪತ್ನಿಯರ ನಡುವೆ ಇಷ್ಟು ನಂಬಿಕೆ ಇರುವುದಾಗಿದ್ದರೆ ಹಲವಾರು ಸಂಸಾರಗಳು ಒಡೆಯದೆ ಉಳಿಯುತ್ತಿದ್ದವು ಅನ್ನುವುದು ಬೇರೆ ಮಾತು!
ನಾವು ಕೂಗಿದ ಕೆಲವೇ ಕ್ಷಣದಲ್ಲಿ ಕಾಡನ್ನೇ ನಡುಗಿಸುವಂತೆ ಕೇಳಿಸಿತು ಕೋವಿ ಈಡಿನ ಶಬ್ದ!
ಗುಡುಂ!
ಇಡೀ ಕಾಡೇ ನಿಶ್ಯಬ್ಧ! ಹಂದಿ ಹೊಡೆದರು, ಆ ಜಾಗಕ್ಕೆ ಓಡಬೇಕು, ಆದರೆ ಅತ್ತಲಿಂದ ಯಾವದೇ ಸಂದೇಶ ಇಲ್ಲ! ಬರೀ ಕಾದಿದ್ದೇ ಬಂತು. ಅಷ್ಟರಲ್ಲೇ ಮತ್ತೊಂದು ಈಡು! ಹ್ಹೋ! ಹಂದಿ ಈಗ ಬಿತ್ತು ಎಂಬ ಆಸೆ ಮೂಡಿತು.
ಆದರೆ ಹೊಡೆದವರು ಯಾಕೆ ಕೂಗು ಹಾಕಲಿಲ್ಲ. ಬಹುಶಃ ಹಂದಿ ತಪ್ಪಿಸಿಕೊಂಡಿರಬೇಕು. ಇವತ್ತು ಯಾಕೋ ಸಮಯಾನೆ ಸರಿಯಿಲ್ಲ. ಒಂದೂ ಒಳ್ಳೆದಾಗ್ತಾ ಇಲ್ಲ! ಹಾಳಾದವರು ಎರೆಡು ಈಡು ಹೊಡೆದರೂ ಒಂದು ಹಂದಿ ಬೀಳಲಿಲ್ಲ.
"ಸತ್ರು ಮುಂಡೆಗಂಡ್ರು! ಎಲ್ಲಿ ಈಡು ಹೊಡ್ಡ್ರೋ? ಹಂದಿನ ಅಚೇ ಕಾಡಿಗೆ ದಾಟ್ಸೆ ಬಿಟ್ರು!"
ಎಲೆ ಅಡಿಕೆ ರಸ ಉಗಿಯುತ್ತ ಬಿಲ್ಲಿನವರಿಗೆ ಮಂಗಳಾರತಿ ಮಾಡಿದ ರಮೇಶಣ್ಣ! ನನಗೆ ಬೇಸರವಾಯಿತು.
ಇದು ಸಿದ್ಧನ ಈಡು ಅಂತ ಕೆಲವರು, ಅಲ್ಲ ಅದು ಅಯ್ಯಣ್ಣಜ್ಜನ ಈಡು ಅಂತ ಮತ್ತೊಬ್ಬರು ಚರ್ಚಿಸತೊಡಗಿದರು. ಎರಡನೆಯ ಈಡಿನ ಶಬ್ದ ಅಜ್ಜನ ಕೊವಿದೆ ಇರ್ಬೇಕು. ಆದರೆ ಅಜ್ಜನ ಈಡು ತಪ್ಪಿತ? ಹಾಗಾದ್ರೆ ಹಂದಿ ಬಲವಾದ್ದೆ ಅನುಮಾನವೇ ಇಲ್ಲ.
ಇಷ್ಟೊತ್ತು ಇಲ್ಲದ ಬಳಲಿಕೆ ಈಗ ಶುರುವಾಯಿತು. ನಿರಾಶೆ ಎಲ್ಲರ ಮುಖದಲ್ಲೂ ಮಿಂಚಿ ಮರೆಯಾಯಿತು. ಸರಿ, ಒಂದು ತಪ್ಪಿದರೇನು. ಇನ್ನೂ ಸಮಯ ಬೇಕಾದಷ್ಟಿದೆ. ಮುಂದುವರೆಯುವ ನಿರ್ಧಾರ ಮಾಡಿ ಮುನ್ನುಗ್ಗತೊಡಗಿದೆವು.
ಆದರೆ ಈಡು ಹೊಡೆದ ಸ್ಥಳದಲ್ಲಿ ನಡೆದದ್ದೇ ಬೇರೆ. ಹಂದಿ ಮುಂದೇ ಎಂಬ ಕೂಗು ಕೇಳಿ ಬಿಲ್ಲಿಗೆ ಕೂತಿದ್ದ ಸಿದ್ಧನ ಕಿವಿ ನೆಟ್ಟಗಾಗಿತ್ತು! ಇಳಿಜಾರಿನಲ್ಲಿ ಹಂದಿ ದಡದಡದಡ ಓಡಿ ಬರುವ ಸದ್ದು ಹತ್ತಿರವಾಗುತ್ತಿದ್ದಂತೆ ಕೋವಿಯ ಚಾಪು ಎಳೆದು ಸದ್ದು ಬಂದ ಕಡೆಗೆ ನೋಡತೊಡಗಿದ. ಹಂದಿ ಹತ್ತಿರ ಹತ್ತಿರ ಬರುತ್ತಿದೆ, ಸ್ವಲ್ಪ ಬಯಲಿದ್ದಲ್ಲಿ ಹಂದಿ ಅವನಿಗೆ ಕಾಣಿಸಿತು. ಅದನ್ನು ನೋಡುತ್ತಲೇ ಒಂದು ಕ್ಷಣ ಸಿದ್ಧನ ಎದೆ ಜಲ್ಲೆಂದಿತು! ಅವನ ಜೀವಮಾನದಲ್ಲೇ ಅಷ್ಟು ದೊಡ್ಡ ಹಂದಿ ನೋಡಿರಲಿಲ್ಲ! ಆದರೂ ಧೈರ್ಯ ಮಾಡಿ ಗುಂಡು ಹೊಡೆದೇ ಬಿಟ್ಟ! ಗುಂಡು ಹಾರಿದ್ದೆ ತಡ, ಸಿದ್ಧಣ್ಣ ಕೊವಿಯನ್ನೂ ಬಿಟ್ಟು ಕ್ಷಣಾರ್ಧದಲ್ಲಿ ಮರವೇರಿದ್ದ!
ಹಂದಿಗೆ ಈಡೇನೋ ಬಿದ್ದಿತ್ತು. ಆದರೆ ಅದು ಸಾಯಲು ಆ ಈಡು ಸಾಕಾಗಲಿಲ್ಲ. ನೋವಿನಿಂದ ಕೋಪಗೊಂಡು ಚೀರುತ್ತಾ ಸಿದ್ಧನನ್ನು ತಿವಿಯಲು ಹೋಗಿ ಅವನು ಸಿಗದಿದ್ದಾಗ ಆ ಮರವನ್ನೇ ಜೋರಾಗಿ ತಿವಿದಿತ್ತು. ಆ ತಿವಿತ ಅದೆಷ್ಟು ಬಲವಾಗಿತ್ತೆಂದರೆ ಮರದ ಮೇಲಿದ್ದ ಸಿದ್ಧ ಕೂಡ ಒಮ್ಮೆ ಹೌಹಾರಿದ! ಅದರ ಆರ್ಭಟ ನೋಡಿ ಗಂಟಲು ಒಣಗಿ ಯಾರನ್ನಾದರೂ ಕರೆಯಬೇಕೆಂಬುದನ್ನೂ ಮರೆತ!
ಸ್ವಲ್ಪ ದೂರದಲ್ಲಿದ್ದ ನನ್ನಜ್ಜನಿಗೆ ಏನೋ ಯಡವಟ್ಟು ಆಗಿದೆ ಎಂದು ಮನವರಿಕೆ ಆಯಿತು. ಕೋವಿ ಹಿಡಿದು ಸಿದ್ಧನ ಹತ್ತಿರ ಓಡಿದ. ನೋಡುತ್ತಾನೆ ಕೆಂಗಣ್ಣು ಬಿಡುತ್ತ ಹಂದಿ ಸಿದ್ಧ ಹತ್ತಿದ ಮರದ ಬುಡದಲ್ಲಿ ನಿಂತು ಅಜ್ಜನನ್ನು ದುರಗುಟ್ಟಿ ನೋಡುತ್ತಿದೆ. ಅದರ ಕೋರೆ ಹಲ್ಲು, ಕೆಂಗಣ್ಣು, ಆಕಾರ ನೋಡಿದ ಎಂತವರಿಗಾದರೂ ಒಮ್ಮೆ ಭಯವಾಗದೆ ಇರಲಾರದು. ಆದರೆ ಅಜ್ಜ ಭಯಪಡಲಿಲ್ಲ. ತನ್ನ ಜೀವಮಾನದಲ್ಲಿ ಅಂತಹ ಅದೆಷ್ಟು ಹಂದಿಗಳನ್ನು ಹೊಡೆದಿದ್ದನೋ ಲೆಕ್ಕ ಇಟ್ಟವರಾರು? ತನ್ನೆಡೆಗೆ ನುಗ್ಗಿ ಬರುವ ಹವಣಿಕೆಯಲ್ಲಿದ್ದ ಹಂದಿಯ ತಲೆಯನ್ನು ಬಗೆದು ಹಾಕಿತ್ತು ಅಜ್ಜನ ಕೋವಿಯ ಈಡಿನ ಗುಂಡು! ಒಂದು ನೆಗೆತ ಮುಂದೇ ಹಾರಿ ವಿಲವಿಲ ಒದ್ದಾಡಿ ಹಂದಿ ತನ್ನ ಪ್ರಾಣ ಬಿಟ್ಟಿತು. ಹಂದಿ ಸತ್ತಿಲ್ಲವೆಂಬ ಅನುಮಾನದಿಂದ ಇನ್ನೊಂದು ಈಡು ಹಾಕಿ ಅಜ್ಜ ಕಾಯತೊಡಗಿದ.
ಆದರೆ ಸಿದ್ಧನ ಸುಳಿವೇ ಇಲ್ಲ! ಕೋವಿ ಅಲ್ಲೇ ಕೆಳಗೆ ಬಿದ್ದಿತ್ತು. ಅಜ್ಜನ ಮನ ಅಳುಕಿತು. ಆ ಹುಡುಗನೆಲ್ಲಿ ಹೋದ?
"ಸಿದ್ಧ...... ಓ ಸಿದ್ಧ............."
"ಅಯ್ಯಾ, ನಾನಿಲ್ಲಿದ್ದೀನಿ"
ಧ್ವನಿ ಎಲ್ಲಿಂದ ಬರುತ್ತಿದೆ ಎಂದು ಅಜ್ಜ ಹುಡುಕಾಡಿದ.
"ಎಲ್ಲಿ ಸತ್ತ್ಯೋ ಮುಂಡೆಗಂಡ?"
ನಡುಗುತ್ತಾ ಮರದ ಮೇಲಿಂದ ಇಳಿಯುತ್ತಿದ್ದ ಸಿದ್ಧನನ್ನು ನೋಡಿ ಅಜ್ಜನಿಗೆ ನಗು ತಡೆಯಲಾಗಲಿಲ್ಲ!
"ನಿನ್ನ ಸಾಯದೆ ಹೋಗಾ....., ಕೋವಿ ಎಸ್ದು ಮರ ಹತ್ತಿಯಲ್ಲಾ.......... ಬಂಡ, ಗಂಡ್ಸನ ನೀನು.....?"
ಎಲೆ ಅಡಿಕೆಯ ಕರೆಗಟ್ಟಿದ ಹಲ್ಲಿನ ಬಾಯಿ ಕಿರಿಯುತ್ತಾ ಕೈ ಕಟ್ಟಿ ನಿಂತಿದ್ದ ಸಿದ್ಧ ಅವಮಾನಗೊಂಡು! ಏನು ಮಾಡಿಯಾನು ಪಾಪ, ಜೀವ ಭಯ ಯಾರಪ್ಪಂದು? ಹಂದಿ ಹೋದ್ರೆ ಹೋಯ್ತು. ಇನ್ನೊದು ಸಿಗುತ್ತೆ. ಜೀವ ಹೋದ್ರೆ ಮತ್ತೆ ಸಿಗಲ್ವಲ್ಲ?
"ನೀವ್ ಸುಮ್ನಿರಿ ಅಯ್ಯಾ............ ಜೀವ ಉಂದಿದ್ರೆ ಬ್ಯಲ್ಲ ಬೇಡ್ಕು ತಿನ್ಬೋದು, ಅದ್ರ ಕ್ವಾರೆ ಹಲ್ಲು ನೋಡಿದ್ರ? ಉಂದೆ ಗುದ್ದಿಗೆ ಹೊಟ್ಟೆ ಬಗ್ದ್ ಹಾಕ್ತಿತ್ತು......"
ತಾನು ಕೋವಿ ಬಿಟ್ಟು ಮರ ಹತ್ತಿದ್ದನ್ನು ಸಮರ್ಥಿಸಿಕೊಂಡ ಸಿದ್ಧನೆಂಬ ಬೂಪ! ಅಜ್ಜ ನಕ್ಕು ಸುಮ್ಮನಾದ. ಸಿದ್ಧನಿನ್ನೂ ಹಂದಿ ಸತ್ತಿರುವ ನಂಬಿಕೆ ಬಾರದೆ ಅಜ್ಜನನ್ನೂ, ಅಜ್ಜನ ಕೊವಿಯನ್ನೂ ಮೆಚ್ಚುಗೆಯಿಂದ ನೋಡಿದ!
"ಅಯ್ಯಾ....
ಕೂಗಿ ಎಲ್ಲರ್ನೂ ಕರೀಲಾ?"
"ಬ್ಯಾಡ ಸುಮ್ನಿರು. ಸೋವಿನವರು ಇನ್ನೂ ಅರ್ಧ ಕಾಡಿನಲ್ಲೇ ಇದ್ದಾರೆ. ಸುಮ್ಮನೆ ಯಾಕೆ ಬರಬೇಕು? ಕಾಡು ಸೋಯುತ್ತಾ ಬರಲಿ"
ಅಜ್ಜನ ತರ್ಕವನ್ನು ಸಿದ್ಧ ಒಪ್ಪಿಕೊಂಡು ಸುಮ್ಮನಾದ!
(......................ಮುಂದುವರೆಯುವುದು)
ಪ್ರವೀಣ,
ReplyDeleteತುಂಬ ರೋಮಾಂಚಕವಾಗಿದೆ ಈ ಶಿಕಾರಿ ಪ್ರಸಂಗ. ನಾನೂ ಆ ಸಮಯದಲ್ಲಿ ಅಲ್ಲಿ ಇರಬೇಕಾಗಿತ್ತು ಎನ್ನುವ ಆಸೆಯಾಯಿತು! ನೀವು ಚಡ್ಡಿ ಕಳಕೊಂಡದ್ದಂತೂ... ಹೋಹೋಹೋ!!
quite interesting!!
ReplyDeleteಬೇಟೆಯ ಕಥೆ ಚೆನ್ನಾಗಿದೆ.ಪೂರ್ಣಚಂದ್ರ ತೇಜಸ್ವಿ ಯವರ ಬೇಟೆಯ ಬರಹಗಳು ನೆನಪಿಗೆ ಬಂತು.
ReplyDeleteಪ್ರವೀಣ್, ನಿಮ್ಮ ಶಿಕಾರಿ ತುಂಬಾ ಖುಷಿಕೊಟ್ಟಿದೆ, ಆದರೆ ಕಾಡುಪ್ರಾಣಿಗಳ ವೈವಿಧ್ಯ ಹಾಗೂ ಸಂಖ್ಯೆ ತುಂಬಾ ಕಮ್ಮಿ ಇರುವುದರಿಂದಲೂ,ನಮ್ಮ ಸಂತೋಷಕ್ಕಾಗಿ ಇನ್ನೊಂದು ಪ್ರಾಣಿಯನ್ನು ಹಿಂಸಿಸುವುದು,ಬಲಿಕೊಡುವುದು ಸರಿಯಲ್ಲ ಎಂಬ ನನ್ನ ವೈಯಕ್ತಿಕ ಅಭಿಪ್ರಾಯದಿಂದಲೂ ಓದಿದ ಎಲ್ಲರಲ್ಲಿ ಒಂದು ಪ್ರಾರ್ಥನೆ, ದಯವಿಟ್ಟು ಯಾರೂ ಶಿಕಾರಿಗೆ ಇಳಿಯಬೇಡಿ, ನಿಮ್ಮ ಲೇಖನ ಸೋಗಸಾಗಿದ್ದಿದ್ದಕ್ಕೆ ಧನ್ಯವಾದಗಳು
ReplyDeleteಸುನಾಥ್ ಸರ್,
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ನನ್ನ ಚಡ್ಡಿ ಬಿದ್ದುಹೋಗಿ ಮರ್ಯಾದೆ ಹೋಗಿದ್ದರೆ ನಿಮಗೆ ನಗು ಅಲ್ವಾ?
ಹ್ಹ ಹ್ಹ ಹ್ಹಾ!
paraanjape sir
ReplyDeletethank you for comment.
V R Bhat sir,
ReplyDeleteನಿಮ್ಮ ಕಳಕಳಿಗೆ ದನ್ಯವಾದಗಳು.
ನಾನು ಶಿಕಾರಿ ಮಾಡುವುದನ್ನು ಬಿಟ್ಟು ಕೆಲವು ವರ್ಷಗಳಾದವು, ಅಷ್ಟೇ ಅಲ್ಲ, ನನ್ನ ತಮ್ಮನಿಗೂ ಕೂಡ ಕೋವಿ ಹಿಡಿದು ಕಾಡಿಗೆ ಹೋಗದಂತೆ ಎಚ್ಚರಿಸಿದ್ದೇನೆ ಕೂಡಾ!
ಆದರೆ ನಮ್ಮ ಕಾಡಿನಲ್ಲಿರುವ ಹುಲಿಗಳು ಮೇಯಲು ಹೋದ ದನಗಳನ್ನೆಲ್ಲ ಹಿಡಿಯುತ್ತವೆ, ಚಿರತೆಗಳು ಕೊಟ್ಟಿಗೆಯಲ್ಲಿ ಕಟ್ಟಿದ ಕರುಗಳನ್ನು, ಬಚ್ಚಲ ಒಲೆಯಲ್ಲಿ ಬೆಚ್ಚಗೆ ಮಲಗಿದ ನಾಯಿಗಳನ್ನು ಹಿಡಿದೊಯ್ಯುವಾಗ ಬೇಸರವಾಗಿ ಅವುಗಳ ಮೇಲೆ ಸಿಟ್ಟು ಬರುವುದೇನೋ ನಿಜ. ಆದರೆ ಸತ್ಯ ಏನೆಂದರೆ, ಕಾಡಿನಲ್ಲಿ ಸಣ್ಣ ಪ್ರಾಣಿಗಳ ಸಂಖ್ಯೆ ಕಡಿಮೆಯಾಗಿ ಆಹಾರದ ಕೊರತೆಯಾದ್ದರಿಂದ ನಾಡಿನತ್ತ ಮುಖ ಮಾಡಿವೆ.
ನನ್ನ ಲೇಖನದ ಉದ್ದೇಶ ಶಿಕಾರಿಯನ್ನು ಪ್ರೋತ್ಸಾಹಿಸುವುದಲ್ಲ. ನನ್ನ ಬಾಲ್ಯದ ಅನುಭವವನ್ನು ಹಂಚಿಕೊಂಡಿದ್ದೇನೆ ಅಷ್ಟೇ. ಆ ಸಮಯದಲ್ಲಿ ನಾವು ಮಾಡುತ್ತಿರುವುದು ತಪ್ಪು ಎಂದಾಗಲಿ, ಶಿಕಾರಿಯನ್ನು ತಡೆಯುವವರಾಗಲಿ ಇರಲಿಲ್ಲ. ಒಬ್ಬ ರೈತನಾಗಿ ಯೋಚಿಸಿದರೆ ಶಿಕಾರಿ ಒಳಮರ್ಮ ಅರ್ಥವಾಗುತ್ತದೆ. ವರ್ಷವಿಡೀ ಕಷ್ಟಪಟ್ಟು ಬೆವರು ಸುರಿಸಿ ದುಡಿದು ಬೆಳೆದ ಬೆಳೆ ಕೈಗೆ ಬರುವ ಮುನ್ನವೇ ಪ್ರಾಣಿಗಳ ಪಾಲಾದರೆ ಆತನ ದಿಕ್ಕೇನು? ಹಂದಿ, ಕಾಡು ಕೊಣದಂತ ಪ್ರಾಣಿಗಳು ಭತ್ತದ ಗದ್ದೆಗೆ ದಾಳಿಯಿಟ್ಟರೆ ತಿನ್ನುವುದಕ್ಕಿಂತ ತುಳಿದು ಹಾಳು ಮಾಡುವುದೇ ಹೆಚ್ಚು. ಆದ್ದರಿಂದ ಶಿಕಾರಿ ಮಾಡುವುದು ಅನಿವಾರ್ಯ.
ನಿಮ್ಮ ಕಳಕಳಿಯುಕ್ತ ಪ್ರತಿಕ್ರಿಯೆಗೆ ಧನ್ಯವಾದಗಳು.
Dr. ಕೃಷ್ಣಮೂರ್ತಿ ಸರ್,
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಅಂದುಕೊಂಡತೆ ಉಚಿತ ದರ್ಶನವಾಗಿಯೇಬಿಟ್ಟಿತಲ್ಲ !! :). ಸಕತ್ ಮಜಾ ಬರ್ತಾ ಇದೆ. ಬರೆಯಿರಿ ಮುಂದಕ್ಕೆ..
ReplyDeleteಮಲೆನಾಡಿನ ಕಾದಿಹಂದಿ ಬೇಟೆಯನ್ನು ಚೆನ್ನಾಗಿ ವಿವರಿಸಿದ್ದೀರ
ReplyDeleteತುಂಬಾ ಖುಷಿ ಆಯಿತು.
ನಾನು ಪಿಯುಸಿ ಮತ್ತು ಕಾಲೇಜ್ ಓದುತ್ತಿರುವಾಗ
ಅಜ್ಜನ ಊರಲ್ಲಿ ಬೇಟೆಗೆ ಹೋದಾಗಿನ ನೆನಪು ತರಿಸಿದಿರಿ
ಸನ್ನಿವೇಶದ ಉತ್ತಮ ಅಭಿವ್ಯಕ್ತತೆ
ಮುಂದುವರೆಯಲಿ ಬೇಟೆ
hhhahahha... super.... antoo handi siktalla... khushiyaytu..
ReplyDeleteSubrahmanya sir,
ReplyDeleteದರ್ಶನವೇನೋ ಎಲ್ಲರಿಗೂ ಉಚಿತವಾಗೆ ಸಿಕ್ಕಿತು. ಆದರೆ ಆ ಸಮಯದಲ್ಲಿ ನನ್ನ ಮುಖ ನೋಡಬೇಕಿತ್ತು!
ನಾಚಿಕೆ ಮುಖವನ್ನು ಕೆಂಪಗಾಗಿಸಿತ್ತು.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಜ್ಯೋತಿಯವರೇ
ReplyDeleteಹಂದಿಯೇನೋ ಸಿಕ್ಕಿತ್ತು, ಆದರೆ ನಮಗೆ ಅದು ತಿಳಿಯದೆ ಸಿಗಲಿಲ್ಲ ಎಂದು ಬೇಸರವಾಗಿತ್ತು.
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಅಶೋಕ್ ಸರ್,
ReplyDeleteಎಲ್ಲಾ ಜಂಜಾಟಗಳನ್ನು ಬದಿಗೊತ್ತಿ ಮನಸಂತೊಷಕ್ಕಾಗಿ ರೈತರು ಶಿಖಾರಿ ಮಾಡುವ ಸನ್ನಿವೇಶ ವರ್ಣಿಸಲು ಸಾಧ್ಯವಿಲ್ಲ!
ಅದರ ಅನುಭವದ ಬಗ್ಗೆ ಒಂದು ಸಣ್ಣ ಬರಹ ಅಷ್ಟೇ...
ಮುಂದಿನ ಭಾಗವನ್ನು ಓದಲು ಮರೆಯದಿರಿ
ಬಹಳ ದಿನಗಳ ನಂತರ ಬಂದು, ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಚೆ೦ದದ ಶಿಕಾರಿ ಲೇಖನ. ತೆಳುಹಾಸ್ಯ ಜೊತೆಗೆ! ಖುಷಿಯಾಯಿತು ಓದಿ.
ReplyDeletesitaram sir,
ReplyDeletethank you very much
hello Praveen!!
ReplyDeletefree show bagge Odi nagu bantu.
tumbaa exciting aagide. bEga munduvaresi.
:-)
malathi S
ಜಾಸ್ತಿ ಕಾಯಿಸೋದಿಲ್ಲ
ReplyDeleteಬೇಗ ಮುಂದುವರೆಸುತ್ತೇನೆ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.