....................................................................
"ಏ ಪವಿ....., ಇವತ್ತು ದೊಡ್ಡ ಬೇಟೆ ಇದೆ"
ಬೆಳಿಗ್ಗೆ ಎದ್ದು ಉಪ್ಪು ಮಸಿ ಕೆಂಡದಿಂದ ಸರ್ವ ಶಕ್ತಿಯನ್ನು ಉಪಯೋಗಿಸಿಹಲ್ಲುಜ್ಜುತ್ತಿದ್ದಾಗ ಅಜ್ಜ ಬಂದು ಪಿಸುಗುಟ್ಟಿದರು ಯಾವುದೋ ಗುಟ್ಟು ಹೇಳುವಂತೆ! ಶಿಕಾರಿಯ ಹೆಸರು ಕೇಳುತ್ತಲೇ ದೇಹದ ಕೂದಲ ಎಳೆ ಎಳೆಯೂ ನಾ ಮುಂದು ತಾ ಮುಂದು ಎಂದುಕೊಳ್ಳುತ್ತಾ ಸೆಟೆದು ನಿಂತವು!
ಶಾಲೆಗೆ ಚಕ್ಕರ್ ಹೊಡೆದು ಬೇಟೆಗೆ ಹೋಗುವ ಮಜಾ ಅನುಭವಿಸಿದವನಿಗೆ ಗೊತ್ತು.ಶಾಲೆಗೆ ಹೋಗಿ ಆ ಮಾಸ್ಟರ ಬೆತ್ತದ ಪೆಟ್ಟು ತಿನ್ನುವುದು ತಪ್ಪಿದ ಖುಷಿ ಒಂದು ಕಡೆ, ಶಿಕಾರಿಯ ಮಜಾ ಇನ್ನೊಂದೆಡೆ! ಯಾರಿಗೆ ಬೇಕು ಶಾಲೆ ಓದು ಎಲ್ಲಾ? ಶಿಕಾರಿ ಮಾಡಿ ನಾಲ್ಕು ಹಂದೀನೋ ಕಡನೋ ಹೊಡೆದರೆ ಸಾಕು. ಜೀವನ ಪರ್ಯಂತ ಹೆಸರು ಉಳಿಯುತ್ತದೆ!
ಆಹಾ! ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ!
ನಿತ್ಯಕರ್ಮಗಳನ್ನೆಲ್ಲಾ ಮುಗಿಸಿ, ತುಳುಸಿ ಕಟ್ಟೆಗೆ ನೀರು ಹಾಕಿ ಕೈ ಮುಗಿದು ತಿಂಡಿಗೆ ಓಡಿದೆ. ಭಕ್ತಿಯ ಗಂಧ ಗಾಳಿಯೇ ಅರಿಯದ ನನಗೆ ಅದೊಂದು ದಿನನಿತ್ಯದ ಕರ್ಮ ಅಷ್ಟೇ! ಅಜ್ಜಿ ಬೈಗುಳವನ್ನು ಸೇರಿಸಿ ಹಾಕಿಕೊಟ್ಟ ಅಕ್ಕಿ ರೊಟ್ಟಿ ಬೆಣ್ಣೆ ಬೆಲ್ಲವನ್ನು ಕಿವಿ ಮುಚ್ಚಿಕೊಂಡು ಮೆಲ್ಲತೊಡಗಿದೆ.
ಮೈ ಹುಷಾರಿಲ್ಲ ಎಂದು ರಜಾ ಅರ್ಜಿ ಬರೆದು ನಮ್ಮ ಕ್ಲಾಸಿಗೆ ತಲುಪಿಸುವಂತೆ ಮಾವನ ಮಗಳ ಹತ್ತಿರ ಕೊಟ್ಟೆ. ಸರ್ವರ ಸಹಿಯಲ್ಲೂ ಪಾರಂಗತನಾದ ನಾನು ಹಾಕಿದ್ದು ನನ್ನ ಮಾವನ ಸಹಿ ಅಂತ ಪಾಪ! ನಮ್ಮ ಟೀಚರಿಗೆ ಹೇಗೆ ಗೊತ್ತಾಗಬೇಕು? ಮಾರ್ಕ್ಸ್ ಕಾರ್ಡ್, ಲೀವ್ ಲೆಟರ್ ಕೊನೆಗೆ ಸ್ಕಾಲರ್ ಶಿಪ್ ಫಾರಂ ಮೇಲೂ ನಾನೇ ಸಹಿ ಮಾಡಿದ್ದು ಅಂತ ಯಾವ ದೊಡ್ಡ IAS ಅಧಿಕಾರಿಗಳೂ ಇನ್ನೂ ಕಂಡು ಹಿಡಿದಿಲ್ಲ! ಯಾವ ಯಾವ ಸ್ಥಳದಲ್ಲಿ ಯಾರ್ಯಾರ ಸಹಿ ಬೇಕು ಅಂತ ಗೊತ್ತುಂಟಲ್ಲ! ಹೀಗೆ ಒಮ್ಮೆ ವಿಜ್ಞಾನದಲ್ಲಿ ಫೇಲಾದ ಕಾರಣ ಮಾರ್ಕ್ಸ್ ಕಾರ್ಡಿಗೆ ಪೋರ್ಜರಿ ಸಹಿ ಮಾಡಿದ್ದೆ. ಅದು ಹೇಗೋ ಮಾವನಿಗೆ ಗೊತ್ತಾಗಿ ಬಾರುಕೋಲಿನಿಂದ ತಿಂದ ಪೆಟ್ಟು ಮರೆಯಲು ಬಾರುಕೊಲನ್ನೇ ಮರೆಯಬೇಕಾಯ್ತು! ಒಮ್ಮೊಮ್ಮೆ ಬಾರುಕೋಲನ್ನು ನೋಡಿ ಮೈ ಜುಮ್ ಅನ್ನೋದುಸುಳ್ಳಲ್ಲ!
ಮಾವ ಕೊಟ್ಟಿಗೆಗೆ ಸೊಪ್ಪಿನ ಹೊರೆ ಹೊತ್ತು ಬರುತ್ತಿದ್ದ. ಕೆಲಸ ಕೆಟ್ಟಿತು! ಗೊತ್ತಾದರೆ ಬಲಿ ಬಿಡಿಸುತ್ತಾನೆ. ಸಂಜೆ ಮನೆಗೆ ಬಂದ ಮೇಲೆ ತೊಂದರೆ ಇಲ್ಲ! ಎರಡು ಪೆಟ್ಟು ಬಿದ್ದರೂ ಸಹಿಸಿಕೊಳ್ಳಬಹುದು. ಶಿಕಾರಿ ಆಗಿರುತ್ತದಲ್ಲ. ಆ ಉತ್ಸಾಹದಲ್ಲಿ ಅಷ್ಟೇನೂ ನೋವು ಆಗುವುದಿಲ್ಲ. ಆದರೆ ಈಗ ಬೇಡ ಎಂದು ಬೈದರೆ! ಅಪಶಕುನ! ಮತ್ತೆ ಶಿಕಾರಿಗೆ ಹೋಗುವ ಹಾಗಿಲ್ಲ!
ಇಲ್ಲ! ಹಾಗಾಗಬಾರದು. ಹಿಂದಿನ ಬಾಗಿಲಿನಿಂದ ಓಡುವುದೊಂದೇ ದಾರಿ! ಸೊಂಟಕ್ಕೆ ಕಟ್ಟಿಕೊಂಡ ಟವಲ್ ಬಿಚ್ಚಿ ಚಡ್ಡಿ ಹಾಕಿಕೊಳ್ಳುವಷ್ಟು ಸಮಯ ಇಲ್ಲ. ಹಾಗೆಯೇ ಓಡಿದೆ ಕೈಗೆ ಸಿಕ್ಕ ಚಡ್ಡಿ ಹಿಡಿದುಕೊಂಡು!
ನಾಗರಬನ ದಾಟಿ ಮೈದಾನಕ್ಕೆ ಹೋಗುವಾಗ ದಾರಿ ಬದಿಯಲ್ಲೇ ಚಡ್ಡಿ ಹಾಕಿಕೊಂಡೆ. ಚಡ್ಡಿಯ ಎರಡೂ ಗುಂಡಿಗಳೂ ಕಿತ್ತು ಹೋಗಿವೆ ತಿಳಿದಿದ್ದು ಆಗಲೇ ತಿಳಿದಿದ್ದು! ಛೆ! ಓಡಿ ಬರುವ ಗಡಿಬಿಡಿಯಲ್ಲಿ ಚಡ್ಡಿಯ ಗುಂಡಿಯನ್ನು ಗಮನಿಸಲೇ ಇಲ್ಲ! ವಾಪಸ್ಸಂತೂ ಹೋಗುವ ಹಾಗಿಲ್ಲ! ಕಂಸ ಮಾವ ಆಗಲೇ ಕೂಗುವುದು ಕೇಳಿಸಿತ್ತು. ಇನ್ನೇನು ಮಾಡಲು ಸಾಧ್ಯ? ಒಂದು ಕೈಯ್ಯಲ್ಲಿ ಚಡ್ಡಿ ಹಿಡಿದು ಎಲ್ಲರೂ ಸೇರುವ ಬ್ಯಾಣದ ಹೆಬ್ಬಲಸಿನ ಮರದತ್ತ ಸಾಗಿ ಜನರ ಹಿಂಡಿನಲ್ಲಿ ಒಂದಾಗಿ ಕುಳಿತೆ. ನಾಗಪ್ಪಣ್ಣನ ಹೊಸ ಕೋವಿ ನೋಡುವ ಕುತೂಹಲದಲ್ಲಿ ನನ್ನ ಚಡ್ಡಿಯನ್ನು ಯಾರು ಗಮನಿಸಲೇ ಇಲ್ಲ! ಸಧ್ಯ ಸಮಾದಾನವಾಯಿತು.
ನಾಗಪ್ಪಣ್ಣನ ಹೊಸ ಕೋವಿ ಪಳಪಳನೆ ಹೊಳೆಯೋತ್ತಿತ್ತು. ಬೀಟೆಯ ಹತ್ತೆಯ ಕೋವಿ. ಎಣ್ಣೆ ಹಚ್ಚಿ ಹೊಳೆಯುವಂತೆ ಮಾಡಿದ್ದ. ನಾನೊಮ್ಮೆ ಮುಟ್ಟುವ ಬಯಕೆಯನ್ನು ತೋಡಿಕೊಂಡಾಗ ನಾಗಪ್ಪಣ್ಣ ಕೆಂಗಣ್ಣು ಬಿಟ್ಟು ಗತ್ತಿನಿಂದ ಹೆದರಿಸಿದ್ದ." ನೆಟ್ಟಗೆ ಒಂದು ದೊಣ್ಣೆ ಹಿಡ್ಕುಣಾಕೆ ಬರಲ್ಲ. ಮೊದ್ಲು ಅದನ್ನ ಕಲ್ತ್ಗಾ, ಆಮೇಲೆ ಕೋವಿ ನೋಡ್ಬೈದಿ, ಹ್ಹ ಹ್ಹ ಹ್ಹಾ, ಕೋವಿ ನೋಡ್ತಾನಂತೆ"ಎಂದು ವ್ಯಂಗ್ಯವಾಡಿದ.
ಹೊಸ ಕೋವಿ ಎತ್ತಿ ನೋಡುವ ಮುಟ್ಟುವ ಆಸೆ ಆಸೆಯಾಗಿಯೇ ಉಳಿಯಿತು. ಮನಸ್ಸಿನಲ್ಲಿ ನಾಗಪ್ಪಣ್ಣನ ಮೇಲೆ ಕೋಪ ಬಂದು ಶಪತ ಮಾಡಿದ್ದೆ!
" ಮಾಡಿಸ್ತೀನಿ ನಿಂಗೆ ಇರು. ನಾನು ದೊಡ್ಡವನಾದ ಮೇಲೆ ನಿನ್ನ ಕೊವಿಗಿಂತಲೂ ಚೆಂದದ ಎರೆಡು ಕೋವಿ ಇಟ್ಟುಕೊಳ್ಳುತ್ತೇನೆ. ಆಮೇಲೆ ನಿನಗೆ ಮುಟ್ಟಲೂ ಬಿಡುವುದಿಲ್ಲ"
ರಮೇಶಣ್ಣ, ನನ್ನಜ್ಜ ಬರುತ್ತಿರುವುದು ನನಗೆ ಖುಶಿ ತಂತು. ಅಜ್ಜ ನನಗೆ ಒಂದು ದೊಣ್ಣೆ, ಒಂದು ಕತ್ತಿಯನ್ನು ಕೊಟ್ಟರು. ಅದೆ ನಮಗೆ ರಕ್ಷಾ ಆಯುಧ! ಅಜ್ಜನ ಕೋವಿ ಹೆಗಲ ಮೇಲೆ ಹೊತ್ತು ಬರುವ ಗತ್ತನ್ನು ನೋಡಿ ನನ್ನ ಮೈ ಮನವೆಲ್ಲಾ ರೋಮಾಂಚನಗೋಳ್ಳುತ್ತಿತ್ತು. ಆ ಗತ್ತೇ ಅಲ್ಲವೇ ನನ್ನನ್ನು ಶಿಕಾರಿಗಾಗಿ ತುಡಿಯುವಂತೆ ಮಾಡಿದ್ದು? ಆ ಕೊವಿಯೇ ಅಲ್ಲವೇ ಈ ಚಪಲತೆಗೆ ಕಾರಣ?
ಎಲೆ ಅಡಿಕೆ ಹಾಕಿಕೊಂಡು, ಬೀಡಿ ಸೇದುವವರು ಬೀಡಿ ಸೇದತೊದಗಿದರು. ನನ್ನ ಕವಳಕಂತೂ ರಮೇಶಣ್ಣ ಇದ್ದನಲ್ಲಾ. ಅವನಿಂದ ಎಲೆ ಅಡಿಕೆ ತೆಗೆದು ಹಾಕಿಕೊಂಡೆ. ಮಲೆನಾಡಿನಲ್ಲಿ ಮಕ್ಕಳು ಎಲೆ ಅಡಿಕೆ ಹಾಕುವುದು ಅಂತ ದೊಡ್ಡ ವಿಷಯವೇನಲ್ಲ!
" ಪೈ, ನಿನ್ಮಾವ ನೋಡದ್ರೆ ನನ್ನ ಕೊಂದೇ ಹಾಕ್ತಾನೆ"
ಪ್ರವೀಣನೆಂಬ ಕ್ಲಿಷ್ಟ ಪದ ರಮೆಶಣ್ಣನ ಬಾಯಲ್ಲಿ ಪೈ ಆಗಿತ್ತು. ರಮೇಶಣ್ಣ ನನ್ನ ಅಚ್ಚು ಮೆಚ್ಚು ಆಗಲು ಕಾರಣ ಎಲೆ ಅಡಿಕೆ ಸಂಬಂಧವೇ ಇರ್ಬೇಕು!
ಯಾವ ಕಾಡಿನಿಂದ ಹಳು ನುಗ್ಗಲು ಶುರುಮಾಡುವುದು? ಯಾರ್ರ್ಯಾರು ಎಲ್ಲೆಲ್ಲಿ ಬಿಲ್ಲಿಗೆ ಕೂರುವುದು ಎಂದು ನಿರ್ಧಾರವಾಗಲು ದೊಡ್ಡ ತರ್ಕ, ವಿವಾದ, ವೈಮನಸ್ಸುಗಳೇ ನಡೆದವು. ಯಾವ ರಾಜಕೀಯ ನಾಯಕರಿಗೂ ಕಡಿಮೆ ಇಲ್ಲದಂತೆ ಚರ್ಚೆಗಳು ನಡೆದವು. ಕೊನೆಗೆ ನನ್ನಜ್ಜನ ತೀರ್ಮಾನವೇ ಅಂತಿಮ. ಹಿರಿಯರೆಂಬ ಗೌರವದಿಂದ ಅಜ್ಜನ ಮಾತನ್ನು ಒಪ್ಪಿಕೊಂಡು ಎಲ್ಲರೂ ಎದ್ದು ನಿಂತರು. ನಾನೂ ದೊಣ್ಣೆಯನ್ನೇ ಕೊವಿಯಂತೆ ಹೆಗಲ ಮೇಲೆ ಇಟ್ಟುಕೊಂಡು ಗತ್ತಿನಿಂದ ಎದ್ದು ನಿಂತೆ.
ಅಷ್ಟೇ!
ಜೋರಾಗಿ ನಗು! ಎಲ್ಲರೂ ಬಿದ್ದು ಬಿದ್ದು ನಗುತ್ತಿದ್ದಾರೆ!
ಯಾಕೆ ಎಲ್ಲಾ ನಗ್ತಿದ್ದಾರೆ?
ಅರೆ.......!
(ಮುಂದುವರೆಯುವುದು..................)
ಮಲೆನಾಡಿನಲ್ಲಿ ಶಿಕಾರಿ ರೈತರ ಮನರಂಜನಾ ಕಾರ್ಯಗಳಲ್ಲಿ ಒಂದು. ಜೊತೆಗೆ ಕಾಡುಕೋಣ, ಹಂದಿಯಂತ ಪ್ರಾಣಿಗಳಿಂದ ಬೆಳೆಯನ್ನು ಕಾಪಾಡಿಕೊಳ್ಳಲು ಶಿಕಾರಿ ಅನಿವಾರ್ಯ. ಅಂತಹ ಶಿಕಾರಿಯ ಒಂದು ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.
ಮಲೆನಾಡಿನ ಪ್ರತಿಯೊಬ್ಬ ಮಗುವೂ ಕೂಡ ಬೇಟೆಯ ಆಸಕ್ತಿ ಹೊಂದಿರುತ್ತದೆ. ಸಾದಾರಣವಾಗಿ ಪ್ರತಿಯೊಬ್ಬರ ಮನೆಯಲ್ಲೂ ಕೋವಿ ಇದ್ದೆ ಇರುತ್ತದೆ. ಹಿರಿಯರೊಂದಿಗೆ ರಾತ್ರಿ ಹೊತ್ತಿನಲ್ಲಿ ಶಿಕಾರಿಗೆ ಮಕ್ಕಳೂ ಹೋಗುತ್ತಾರೆ. ದೊಡ್ಡ ಶಿಕಾರಿಯಷ್ಟು ಅಪಾಯ ರಾತ್ರಿ ಇರುವುದಿಲ್ಲವಾದದ್ದರಿಂದ, ರಾತ್ರಿ ಸಣ್ಣ ಸಣ್ಣ ಪ್ರಾಣಿಗಳು ಮಾತ್ರ ಸಿಗುವುದರಿಂದ ಮಕ್ಕಳನ್ನು ಕರೆದೊಯ್ಯುತ್ತಾರೆ. ಎಷ್ಟೋ ಸಾರಿ ಮಧ್ಯೆ ಕಾಡಿನಲ್ಲಿ ಪ್ರಾಣಿ ಕಂಡು ಕಣ್ತಪ್ಪಿಸಿ ಓಡಿದಾಗ ಅದನ್ನು ಬೆನ್ನಟ್ಟಿ ಹೋಗಬೇಕಾಗುತ್ತದೆ. ಅಂತ ಸಂದರ್ಭದಲ್ಲಿ ಒಬ್ಬರನ್ನೇ ಕಾಡಿನಲ್ಲಿ ಬಿಟ್ಟು, ಪ್ರಾಣಿಯ ಬೆನ್ನಟ್ಟಿ ಹೋಗುತ್ತಾರೆ. ಎಷ್ಟೋ ಬಾರಿ ಕತ್ತಲೆಯಲ್ಲಿ ದಿಕ್ಕು ತಪ್ಪಿ ಬೆಳಗಿನೊರೆಗೂ ಮಕ್ಕಳು ಕಾಡಿನಲ್ಲೇ ನಿಂತಿದ್ದು ಉಂಟು! ಇದು ನನ್ನ ಸ್ವಂತ ಅನುಭವ ಕೂಡ! ಆ ಕತೆಯನ್ನು ಇನ್ನೊಮ್ಮೆ ಹಂಚಿಕೊಳ್ಳುತ್ತೇನೆ.
ಪ್ರವೀಣ್...
ReplyDeleteತುಂಬಾ ಸೊಗಸಾಗಿದೆ...!
ಒಮ್ಮೆ ಹಳ್ಳಿಗೆ ಹೋಗಿ ಬೇಟೆಗೆ ಹೋದಂತಾಯಿತು...!
ನಿಜಕ್ಕೂ ಅದೊಂದು ರೋಚಕ ಅನುಭವ...!!
ನಿಮ್ಮ ಬರವಣಿಗೆಯ ಶೈಲಿ ಚೇತೋಹಾರಿಯಾಗಿದೆ...!
ಮುಂದೇನಾಯಿತು...??
ಎಲ್ಲರೂ.. ಯಾಕೇ ನಕ್ಕರು ?
ಚಡ್ಡಿ ಬಿದ್ದು ಹೋಯ್ತಾ ?
ಆತ್ಮ ಲಿಂಗ ದರುಶನವೇ ?
ಹ್ಹಾ..ಹ್ಹಾ..! ಕಾಯಿಸ ಬೇಡಿ.. ಬೇಗನೇ ಬರೆಯಿರಿ...
ಪ್ರಕಾಶಣ್ಣ.
ReplyDeleteಹಳ್ಳಿಯ ಮುಗ್ಧ ಮನಸ್ಸುಗಳ ಮಧ್ಯೆ ನಾವು ಎಷ್ಟೊಂದು ತೃಣ ಸಮಾನರು ಅಲ್ವಾ?
ಖಂಡಿತಾ ಹಳ್ಳಿಗೆ ಹೋಗಿ ಶಿಕಾರಿ ಮಾಡಿ ಬನ್ನಿ. ಆ ಮಜವನ್ನು ಅನುಭವಿಸಿಯೇ ಪಡೆಯಬೇಕು.
ಮುಂದಿನ ಭಾಗ ಶೀಗ್ರದಲ್ಲೇ ಬರಲಿದೆ. ಸ್ವಲ್ಪ ಕಾಯಬೇಕು ಅಷ್ಟೇ!
ಬೇಗನೆ ಬಂದು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಪ್ರವೀಣ್ ಬೇಟೆಯ ಕಥೆ ಚೆನ್ನಾಗಿದೆ.ಮುಂದುವರಿಸಿ.ಹೆಚ್ಚು ಕಾಯಿಸಬೇಡಿ.ಅಂದಹಾಗೆ ಬಾಲ್ಯದಲ್ಲಿ ಚಡ್ಡಿಯ ಗುಂಡಿಗಳು ಕಿತ್ತರೆ ನಮಗೆ ಉಡಿದಾರ ಮಾನರಕ್ಷಕನಾಗಿ ನೆರವಿಗೆ
ReplyDeleteಬರುತ್ತಿತು.1978ನಲ್ಲಿ ಕೊಳ್ಳೆಗಾಲದಲ್ಲಿ ಕೆಲಸದಲ್ಲಿದ್ದಾಗ ನಮ್ಮ ಸ್ನೇಹಿತರೊಬ್ಬರು
'ಬನ್ನಿ ಡಾಕ್ಟ್ರೆ ಇಲ್ಲೇ ಹೋಗಿಬರೋಣ'ಅಂತ ಶಿಕಾರಿಗಳ ಗುಂಪಿನ ಜೊತೆ ವೀರಪ್ಪನ್
ಇದ್ದ ಮಲೆಮಹದೇಶ್ವರ ಬೆಟ್ಟಕ್ಕೆ ಕರೆದುಕೊಂಡು ಹೋದರು.ಸಂಜೆಆರು ಗಂಟೆಗೆ ಬೆಟ್ಟ
ಹತ್ತಲು ಶುರು ಮಾಡಿ ಬೆಳಿಗ್ಗೆ ಐದರ ತನಕ ಕಾಡಿನಲ್ಲೇ ಇದ್ದದ್ದು ಅಧ್ಬುತ ಅನುಭವ.
ಕೃಷ್ಣಮೂರ್ತಿ ಸರ್,
ReplyDeleteಉಡಿದಾರ ಇರುತ್ತಿದ್ದಿದ್ದೇನೋ ಹೌದು. ಆದರೆ ನನಗೆ ಉಡಿದಾರ ಎಂದರೆ ಸಿಕ್ಕಾ ಪತ್ತೆ ಸಿಟ್ಟು! ನನ್ನ ಅಜ್ಜ ಬೈದು ಉಡಿದಾರ ಕಟ್ಟಿದರೆ ಮರುದಿನವೇ ಅದನ್ನು ಕಿತ್ತು ಹಾಕಿರುತ್ತಿದ್ದೆ! ಅದ್ದರಿಂದ ಚಡ್ಡಿಯನ್ನು ಹಿಡಿದುಕೊಂಡೆ ಮಾನರಕ್ಷಣೆ ಮಾಡಿಕೊಳ್ಳಬೇಕಾಗಿತ್ತು,
ರಾತ್ರಿ ಶಿಖಾರಿಯ ಅನುಭವಗಳು ಬಲು ರೋಮಾಂಚನ! ಹಾವು, ಚೇಳು, ಮಳೆ, ಗಾಳಿ ಇವ್ಯಾವುದನ್ನು ಗಮನ್ಬಿಸದೆ ರಾತ್ರಿಯಿಡಿ ಶಿಕಾರಿ ಮಾಡುವ ಹುಚ್ಚು ಸರ್ವೇಸಾಮಾನ್ಯ. ಆ ಅನುಭವ ನಿಮಗೂ ಕೂಡ ಆಗಿದೆ ಅಂದಮೇಲೆ ನಾನು ಹೇಳುವುದೇ ಬೇಡ.
ಹೀಗೆ ಬರುತ್ತಿರಿ, ಓದುತ್ತಿರಿ, ಪ್ರೋತ್ಸಾಹಿಸುತ್ತಿರಿ.
ಧನ್ಯವಾದಗಳು.
ರೋಚಕ ಬೇಟೆ ಕಥೆ ಸಕತ್ತಾಗಿದೆ. ಮೈ ನವಿರೇಳುವ೦ತೆ, ಜೊತೆಗೆ ಕಚಗುಳಿಕೊಡುವ ನವಿರು ಹಾಸ್ಯದ ನಿರೂಪಣೆ ಅದ್ಭುತ!! ಅತ್ಯದ್ಭುತ!! ಪ್ರಕಾಶಣ್ಣ ಹೇಳಿದ ಹಾಗೆ ಆತ್ಮಲಿ೦ಗ ದರುಶನವಾಗಿರಬೇಕಲ್ಲವೇ?
ReplyDeleteಬೇಗ ಮು೦ದಿನ ಅವತರಣಿಕೆ ಹೊರಬರಲಿ.
ನಮಸ್ಕಾರ ಗುರುಗಳೇ,
ReplyDeleteಧನ್ಯವಾದಗಳು ಪ್ರಿತಿಕ್ರಿಯೆಗೆ.
ಬೇಟೆಯ ಸಣ್ಣದಾದ ಅನುಭವವೊಂದನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೆನಷ್ಟೇ! ಹೀಗೆ ಬರುತ್ತಿರಿ, ಬೆನ್ನು ತಟ್ಟುತ್ತಿರಿ.
ವಿಶ್ವಾಸವಿರಲಿ!
ಪ್ರವೀಣ್ ಅವರೆ,
ReplyDeleteರೋಚಕವಾಗಿದೆ!. ದೊಣ್ಣೆಯನ್ನೇ ಕೋವಿಯೆಂದು ಎತ್ತಿ ಹಿಡಿದದುನ್ನು ನೋಡಿ ನನಗೂ ನಗು ಬಂತು. ಮುಂದಿನದನ್ನು ನೆನೆಸಿಕೊಂಡರೆ ಇನ್ನೂ ಕುತೂಹಲವಾಗುತ್ತಿದೆ. ಬೇಗ ಬರೆಯಿರಿ.
ಸುಬ್ರಮಣ್ಯ ಅವರೇ,
ReplyDeleteಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.
ಹೇಗೆ ಬರುತ್ತಿರಿ, ನನ್ನನು ಬೆಂಬಲಿಸುತ್ತಿರಿ.
ಮುಂದಿನ ಭಾಗದೊಂದಿಗೆ ಶೀಘ್ರದಲ್ಲೇ ಬರುತ್ತೇನೆ.
ಪ್ರವೀಣ ಉಡಿದಾರ...ಅಂದ್ರೆ..ಹಹಹ ನನಗೂ ನನ್ನ ಸ್ನೇಹಿತನೊಬ್ಬನ ಕೀಟಲೆ ನೆನಪಾಗುತ್ತೆ....ಹಳ್ಳಿಲಿ ಉಡಿದಾರವೇ ಚಡ್ಡಿಯನ್ನ ಹಿಡಿದಿಡುವ ಸರದಾರ...ಅದನ್ನು ಬೇಕೆಂದೇ ಸಡಿಲಿಸಿ ಚಡ್ಡಿ ನೆಲಕಚ್ಚೋ ಥರ ಮಾಡೊದೇ ಅವನ ಚೇಷ್ಟೆ...ಚನ್ನಾಗಿದೆ...ಮುಮ್ದುವರೆಯಲಿ...
ReplyDeleteಅಜಾದ್ ಸರ್,
ReplyDeleteಬಾಲ್ಯದಲ್ಲಿ ಇಂತಹ ಕೀಟಲೆ ಮಾಡಿ ನಗುವವರು ನಮ್ಮನ್ನು ಅಳಿಸುತ್ತಿದ್ದರು.
ಅವರಿಗೆ ಮಜಾ, ನಮಗೆ ಸಜಾ
ಹ್ಹ ಹ್ಹ ಹ್ಹಾ!
ಪ್ರತಿಕ್ರಿಯೆಗೆ ಧನ್ಯವಾದಗಳು.
ಲೇಖನ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ.
ReplyDeleteನಿಮ್ಮವ,
ರಾಘು.
ರಾಘು ಅವರೇ,
ReplyDeleteಧನ್ಯವಾದಗಳು.
ಹೀಗೆ ಬರುತ್ತಿರಿ
Praveen, shikari -part 1 chennaagide. bEga munduvaresi. naanu huTTi beLedaddellaa mumbai nalli. nanna maneyavaru-srikanth- is from Teerthahalli. my mother-in-law is from haraLimuTT and she used to recount thrilling tales of hunting. I remember having visited ur blog once before. thanks for visiting my blog
ReplyDelete:-)
malathi S
Malati madam,
ReplyDeletethanks for visiting my blog.
the hunting experience is wonderful!
ಶಿಕಾರಿಯ ಅನುಭವವೇ ಅಂತಹುದು!
ಶಿಕಾರಿಯ ಅನುಭವಗಳನ್ನು ನನ್ನಜ್ಜನಿಂದ ಕೇಳುವಾಗಲೇ ಮೈ ನವಿರೇಳಿಸುವ ರೋಮಾಂಚನವಾಗುತ್ತಿತ್ತು!
ನಿಮ್ಮ ಅತ್ತೆಯವರು ಹೇಳುತ್ತಿದ್ದಾಗ ನೀವೆಷ್ಟು ಕುತೂಹಲದಿಂದ ಕೇಳುತ್ತಿದ್ದೆರೋ ನಾನು ಹಾಗೆ ಕೇಳುತ್ತಿದ್ದೆ.
ಆ ಕುತೂಹಲವೇ ನನಗೆ ಶಾಲೆಗೇ ಚಕ್ಕರ್ ಹೊಡೆದು ಬೇಟೆಗೆ ಹೋಗಲು ಪ್ರೇರಣೆ.
ನಿಮ್ಮ ಮನೆಯವರು ತೀರ್ಥಹಳ್ಳಿಯವರೇ ಎಂದು ತಿಳಿದು ಸಂತೋಷವಾಯಿತು. ಹೀಗೆ ಬರುತ್ತಿರಿ.
ಧನ್ಯವಾದಗಳು.
ಪ್ರವೀಣ,
ReplyDeleteತುಂಬ ರೋಮಾಂಚಕವಾಗಿದೆ ಲೇಖನ!
Superb Praveen...ಮಲೆಗಳಲ್ಲಿ ಮದುಮಗಳು, ಕುಡಿಯರ ಕೂಸು, ಕರ್ವಾಲೋ ಇವುಗಳದ್ದೇ ಪೂರ್ವ ಭಾಗವೇನೋ ಅಥವಾ ಮುಂದಿನ ಪೀಳಿಗೆಯ ಕಥೆಯೇನೋ ಎಂಬಂತೆ ತೋರಿತು.. (ದಯವಿಟ್ಟು ಹೋಲಿಸುತ್ತಿದ್ದೇನೆ ಎಂದುಕೊಳ್ಳಬೇಡಿ) ತುಂಬ ಖುಷಿಯಾಯಿತು. ಬೇಗ ಮುಂದಿನ ಭಾಗವನ್ನು ಬರಯಿರಿ...
ReplyDeleteಸುನಾತ್ ಸರ್,
ReplyDeleteಧನ್ಯವಾದಗಳು
ಹೀಗೆ ಬರ್ತಾ ಇರಿ.
ಜ್ಯೋತಿಯವರೇ
ReplyDeleteಅಷ್ಟೊಂದು ಯೋಗ್ಯತೆ ನಮಗಿಲ್ಲವೂ ಇಲ್ಲ!
ಆದರೂ....
ಕೇವಲ ಅಣ್ಣ ಅನುಭವಗಳಿಗೆ ಅಕ್ಷರದ ರೂಪ ಕೊಟ್ಟಿದ್ದೇನೆ ಅಷ್ಟೇ!
ನನ್ನ ಬ್ಲಾಗಿಗೆ ಬಂದು ಈ ಅಲ್ಪನ ಬರಹವನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು. ಆದಷ್ಟು ಬೇಗ ಮುಂದಿನ ಭಾಗದೊಂದಿಗೆ ಬರುತ್ತೇನೆ.
ಹೀಗೆ ಪ್ರೋತ್ಸಾಹಿಸುತ್ತಿರಿ.
ಶಿಕಾರಿ ಅನುಭವ ರೋಚಕವಾಗಿದೆ, ಮು೦ದಿನ ಭಾಗಕ್ಕೆ ಕಾದಿರುವೆ
ReplyDeletethanks paraanjape sir
ReplyDeletei will be back very soon
both my parents r from thirthahalli but me born and brought up at Mysore but contantly my mother told stories of her childhood in malnad .My father in his younger days was also into hunting in thick jungle of thirthahalli so ur write up made me relive my childhood stories.
ReplyDeletemrinal,
ReplyDeletethanks for your valuable comments