Wednesday, May 26, 2010

ಶಿಕಾರಿ (ಭಾಗ 3)

ಇತ್ತ ಇದ್ಯಾವುದನ್ನೂ ಅರಿಯದ ನಾವು ಉತ್ಸಾಹ ಕಳೆದುಕೊಂಡು ಕಾಡಿನಲ್ಲಿ ಸೋಯುತ್ತಾ ಹೋಗುತ್ತಿದ್ದೆವು. ಎರಡು ಈಡು ಹೊಡೆದರೂ ಹಂದಿ ಸಿಗಲಿಲ್ಲ ಎಂಬ ಬೇಸರ ಮನದಲ್ಲಿ ಮನೆಮಾಡಿತ್ತು. ಪೂರ್ತಿ ಕಾಡೇ ನಡುಗಿಸುವಂತೆ ಕೂಗುತ್ತಿದ್ದವರ ಧನಿ ಉಡುಗಿ ಹೊಗಿತ್ತು!

ಮಳೆಗಾಲದಲ್ಲಿ ಗುಡ್ಡದ ಮೆಲಿಂದ ನೀರು ಹರಿದು ಬರುವ ಸಣ್ಣ ಹಳ್ಳದಂತ ಕಾಲುವೆಯಲ್ಲಿ ನಾನೂ ರಮೆಶಣ್ಣನ ಜೊತೆ ಸಾಗುತ್ತಿದ್ದೆ. ಹಳ್ಳ ಕಡಿದಾಗಿತ್ತು. ಬಳ್ಳಿಯ ಸಹಾಯದಿಂದ ಮಾತ್ರ ಮೇಲೆ ಹತ್ತಬಹುದಾಗಿತ್ತು. ಎಲೆ ಅಡಿಕೆ ಜಗಿಯುತ್ತಾ ಯಾವುದೋ ಮಾತಿನಲ್ಲಿ ಮೈಮರೆತಿದ್ದ ನಮ್ಮಿಬ್ಬರಿಗೂ ಅದು ಹಳ್ಳ ಎಂಬುದು ತಿಳಿಯಲೇ ಇಲ್ಲ!

ರಮೆಶಣ್ಣನ ನಗೆಚಟಾಕಿಗೆ ಹೊಟ್ಟೆ ಹಿಡಿದು ನಗುತ್ತಾ ಸಾಗುತ್ತಿದ್ದಂತೆಯೇ ಹಿಂದಿನಿಂದ ದಡದಡ ಎಂಬ ಶಬ್ಧ! ಹಂದಿಯೋ ಕಡವೋ ಕಾಡುಕೋಣವೋ ಮೇಲೆ ಓಡಿರಬೇಕು. ರಮೇಶಣ್ಣ ಹಿಡ್ಡೀಡ್ಡೀ ಎಂದು ಕೂಗಿದಂತೆ ಶಬ್ಧ ಇನ್ನೂ ಹತ್ತಿರವಾಯಿತು. ಕಣ್ಮುಚ್ಚಿ ಬಿಡುವುದರೊಳಗೆ ಇಳಿಜಾರಿನ ಹಳ್ಳದಲ್ಲಿ ಆನೆಗಾತ್ರದ ಹಂದಿಯೊಂದು ನಮ್ಮತ್ತಲೇ ನುಗ್ಗಿ ಬರುತ್ತಿತ್ತು!

 ಹಂದಿ ಓಡಿ ಬರುತ್ತಿರುವ ಶಬ್ಧ ಕೇಳಿದ್ದೇ ತಡ ರಮೇಶಣ್ಣ ಕೂಗಿದ,
 
"ಪೈ ಓಡು, ಮರ ಹತ್ತು"
 

ಅವನು ಅದ್ಯಾವ ಮಾಯದಲ್ಲಿ ಓಡಿ ಹಳ್ಳದೊಳಗೇ ಬೆಳೆದಿದ್ದ ಸಣ್ಣ ಮರವೊಂದನ್ನು ಹತ್ತಿದನೋ ತಿಳಿಯಲಿಲ್ಲ! ಮೇಲಿನಿಂದ ನೋಡುತ್ತಾನೆ ನಾನಿನ್ನೂ ಅಲ್ಲೇ ನಿಂತಿದ್ದೇನೆ.
"ಸಾಯ್ತಿಯಲ್ಲೋ............ ಒಡ್ಬಾರೋ ಬೇಗ" 

ರಮೇಶಣ್ಣ ಕೂಗುತ್ತಿದ್ದಾನೆ!

ನನಗೋ ಜಂಗಾಬಲವೇ ಉಡುಗಿಹೋದ ಅನುಭವ! ಓಡಲು ಕಾಲುಗಳೇ ಬರಲೊಲ್ಲವು. ದೆಹವಿಡೀ ತರಗುಟ್ಟುತ್ತಿದೆ.  ಬೆವರಿನಿಂದ ತೋಯ್ದು, ಗಂಟಲ ಪಸೆ ಆರಿ ಹೊಗಿತ್ತು. ಕೂಗಲು ಬಾಯಿಯಿಂದ ಸ್ವರವು ಮುಷ್ಕರ  ಹೂಡಿತ್ತು. ರಮೇಶಣ್ಣನ ಕೂಗು ನನ್ನ ಕಿವಿಗೆ ಬೀಳುತ್ತಲೇ ಇರಲಿಲ್ಲ!

ಹಂದಿ ನನ್ನ ಹತ್ತಿರ ಬಂದಾಗಿತ್ತು. ನನಗೆ ಒಮ್ಮೆಲೇ ಎಲ್ಲಾ ನೆನಪಾಗತೊಡಗಿತು. ಮನೆ ಅಮ್ಮ, ಅಪ್ಪ, ಮಾವ, ಸ್ಕೂಲು, ಟೀಚರ್ರು, ಅಜ್ಜ, ಹಂದಿ...................
ಒಂಬ್ಬೊಬ್ಬರಾಗಿ ಕಣ್ಮುಂದೆ ಮಿಂಚಿ ಮರೆಯಾದರು.  ನಾನೇನು ಮಾಡಲಿ? ನನ್ನ ಕತೆ ಮುಗಿಯಿತು. ಬೆಂಗಳೂರಿನ ಲಾಲ್ ಬಾಗ್ ನೋಡಬೆಕೆಂಬ ನನ್ನ ಗುರಿ ಈಡೆರುವ ಮೊದಲೇ ನಾನು ಸಾಯುತ್ತೇನೆಂಬ ಯೋಚನೆ ಅಂತಹ ಸಮಯದಲ್ಲಿಯೂ ಶುರುವಾಯಿತು!

ಅಯ್ಯೋ ದೆವರೇ, ಎನ್ನುತ್ತಾ ಕಾಣದ ದೇವರಿಗಾಗಿ ಆಗಸದತ್ತ ನೊಡಿದೆ. ಅಷ್ಟೇ! ಪಳ್ಳನೆ ಮಿಂಚೊಂದು ಮಿಂಚಿತು. ಗಾಡಂಧಕಾರದ ಕಗ್ಗತ್ತಲಲ್ಲಿ ಸೂರ್ಯನೇ ಉದಯಿಸಿದಂತೆ ಬೆಳಕೊಂದು ಮೂಡಿತು. ಮುಳುಗುತ್ತಿರುವ ನನಗೆ ಹುಲ್ಲು ಕಡ್ಡಿಯ ಆಸರೆ ಸಿಕ್ಕಿತ್ತು!

ನಾನು ನಿಂತ ಸ್ಥಳದಲ್ಲಿ ಸರಿಯಾಗಿ ನನ್ನ ನೆತ್ತಿಯ ಮೇಲೆ ಮರವೊಂದು ಅಡ್ಡಡ್ಡ ಬಿದ್ದಿತ್ತು. ಕೈಗೆಟುವ ಎತ್ತರದಲ್ಲಿ ಬಿದ್ದಿದ್ದ ಮರ ಎರೆಡೂ ದಡಗಳನ್ನು ಸೇರಿಸಿತ್ತು. ತಡಮಾಡಲಿಲ್ಲ! ಒಂದೇ ನೆಗೆತಕ್ಕೆ ಹಾರಿ ಎರಡೂ ಕೈಗಳಿಂದ ಮರವನ್ನು ಹಿಡಿದು ಜೋತುಬಿದ್ದೆ! ಅದೇ ಕ್ಷಣದಲ್ಲಿ ಹಂದಿ ನನ್ನ ಕೆಳಗಿನಿಂದಲೇ ಗುರುಗುಟ್ಟುತ್ತಾ ದಾಟಿಹೊಯಿತು. ಅದರ ಓಡಿದ ಶಬ್ಧ ಮರೆಯಾಗುವವರೆಗೂ ಕೈಬಿಡಲೇ ಇಲ್ಲ!

ಇಡೀ ಕಾಡೇ ನಿಶ್ಯಬ್ಧ! ಹಂದಿ ತುಂಬಾ ದೂರ ಹೋಗಿರಬೇಕು. ಎಂದು ಯೋಚಿಸುತ್ತಾ ಕೆಳಗಿಳಿಯುವ ನಿರ್ದಾರ ಮಾಡಿ ಕೈ ಬಿಟ್ಟೆ!
 
ಅಷ್ಟೇ!
 
ಅಯ್ಯೋ......... ಅಮ್ಮಾ.................ಸತ್ತೇ..................!
ನನ್ನ ಬಾಯಿಂದ ಚೀತ್ಕಾರ ಹೊರಟಿತ್ತು!

ಜೀವ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಹಿಂದೆ ಮುಂದೆ ಯೋಚಿಸದೇ  ಹಳ್ಳದ ಮೇಲೆ ಅಡ್ಡಲಾಗಿ ಬಿದ್ದ ಮರವನ್ನು ನೆಗೆದು ಹಿಡಿದುಕೊಂಡು ಹಂದಿಯಿಂದ ಪ್ರಾಣವನ್ನೇನೋ ಉಳಿಸಿಕೊಂಡಿದ್ದೆ. ಆದರೆ ಆ ಭಯದಲ್ಲಿ ನಾನು ಹಿದಿದುಕೊಂಡಿದ್ದು ಕಾಡುಸಂಪಿಗೆ ಮರವಾಗಿತ್ತು. ಅದರಲ್ಲೇನು ವಿಶೇಷ ಅಂತೀರಾ? ಮಲೆನಾಡಿನಲ್ಲಿ ಅತೀ ಹೆಚ್ಚು ಮುಳ್ಳುಗಳು  ಮತ್ತು  ನಂಜಿನ ಮುಳ್ಳುಗಳಿರುವ ಮರ ಕಾಡುಸಂಪಿಗೆ ಮರ! ಅದನ್ನೇ ನಾನು ಹಿಡಿದು ನೇತಾಡಿದ್ದು!

ದಬ್ಬಣದಂತ ಮುಳ್ಳುಗಳು ನನ್ನ ಕೈಯನ್ನು ಚುಚ್ಚಿಕೊಂಡಿದ್ದವು. ಎಷ್ಟೇ ಒದ್ದಾಡಿ ಬೊಬ್ಬೆ ಹೊಡೆದರೂ ಕೈ ಬಿಡಿಸಿಕೊಳ್ಳಲು ಆಗದೇ ಇನ್ನಷ್ಟು ನೋವಾಗುತ್ತಿತ್ತು. ಕೊನೆಗೆ ರಮೇಶಣ್ಣ ನನ್ನ ಬೊಬ್ಬೆ ಕೆಳಿ ಓಡಿ ಬಂದು ಕೈ ಬಿಡಿಸಿದ್ದ. ನನ್ನನ್ನು ಕೆಳಗಿಳಿಸಿದ ನಂತರ ಕೈಯ್ಯಲ್ಲಿ ಮುರಿದು ಉಳಿದುಕೊಂಡಿದ್ದ ಮುಳ್ಳುಗಳನ್ನು ಕೀಳಲು ಪ್ರಯತ್ನಿಸಿ ಇನ್ನಷ್ಟು ನೋವು ಹೆಚ್ಚಿಸುತ್ತಿದ್ದ.

ರಕ್ತ ಕೋಡಿಯಾಗಿ ಹರಿಯುತ್ತಿತ್ತು. ಬೆರಳುಗಳೂ ಸೀಳಿಕೊಂಡು ಅಸಾಧ್ಯ ನೊವಾಗುತ್ತಿತ್ತು. ಹಂದಿ ಓಡಿಬಂದು ನನ್ನ ಕೈ ಜಗಿಯುತ್ತಿರುವ ಅನುಭವ! ಸುತ್ತಲೂ ಕತ್ತಲು ಕವಿದಂತಾಯಿತು. ಕಣ್ಣು ಬಿಡಲೂ ತ್ರಾಣವಿಲ್ಲ. ಯಾರೊ ನೀರು ಕುಡಿಸಿದರು. ನನಗೆ ತಲೆ ಸುತ್ತಿ ಪ್ರಜ್ನೆ ತಪ್ಪಿತು. ಕಾಡಿನ ಔಶಧಿ ಮಾಡಿ ಕೂಡಲೇ ಆಸ್ಪತ್ರೆಗೆ ಹೊತ್ತು ಓಡಿದರು.

ನನ್ನ ಕೈ ನೊಡಿದ ಡಾಕ್ಟ್ರು ಬೆರಗಾಗಿ ಇಕ್ಕಳದಿಂದ ಮುರಿದು ಉಳಿದಿದ್ದ ಮುಳ್ಳುಗಳನ್ನೆಲ್ಲಾ ಎಳೆದು ತೆಗೆದಿದ್ದೂ, ಹರಿದ ಗಾಯಗಳಿಗೆ ಹೊಲಿಗೆ ಹಾಕಿದ್ದೂ ನನಗೆ ಗೊತ್ತಾಗಿದ್ದು ಪ್ರಜ್ನೆ ಬಂದಾದ ಮೆಲೆ ರಮೆಶಣ್ಣ ಹೇಳಿದಾಗಲೇ! ನನಗೆ ಈ ಗತಿಯಾಗಲು ಕಾರಣವಾದ ಹಂದಿಯನ್ನು ನನ್ನಜ್ಜನೇ ಹೊಡೆದದ್ದಂತೂ ಗಾಯದ ನೋವನ್ನೆಲ್ಲಾ ಮರೆಸಿತ್ತು!

ಹಂದಿ ನೋಡುವ ಆಸೆ ಹೆಚ್ಚಾಯಿತು. ಡಾಕ್ಟರನ್ನು ಕಾಡಿ ಬೇಡಿ ರಮೇಶಣ್ಣನೊಂದಿಗೆ ಮನೆಗೆ ಹೊರಟೇಬಿಟ್ಟೆ. ಕೈ ಗಾಯಗಳು, ನೋವು, ರಕ್ತ ಯಾವುದರ ಪರಿವೆಯೂ ಇಲ್ಲ. ಮನಸಿನ ತುಂಬಾ ಹಂದಿ ಹಂದಿ! ಹಂದಿ ಹೊಡೆದ ಖುಶಿ ಅಷ್ಟೇ!

ನನ್ನ ಜೀವಮಾನದಲ್ಲಿ ಎಂದೆಂದೂ ಮರೆಯದ ಶಿಕಾರಿಯೊಂದು ಹೀಗೆ ನಡೆದಿತ್ತು. ಅಂದು ನಾನು ಪ್ರಾಣಭಯದಿಂದ ಮುಳ್ಳೆನ್ನುವುದನ್ನು ಮರೆತು ಮರವನ್ನು ಹಿಡಿದು ಜೋತುಬಿದ್ದಿದ್ದೆ. ಆ ಕ್ಷಣ ಮುಳ್ಳು ಚುಚ್ಚಿದ ನೋವೇ ಆಗಲಿಲ್ಲ. ಯಾಕೆಂದರೆ ಹಂದಿಯಿಂದ ಪ್ರಾಣ ಉಳಿಸಿಕೊಳ್ಳಬೆಕಿತ್ತು. ಆ ಭಯವೇ ಹೆಚ್ಚಾಗಿತ್ತು. ಆದರೆ ಹಂದಿಯ ಪರಿಸ್ಥಿತಿಯೂ ಹೆಚ್ಚು ಕಡಿಮೆ ನನ್ನಂತೆಯೇ ಇತ್ತು ಎಂದು ಈಗಲೂ ಒಮ್ಮೊಮ್ಮೆ ಮನದಲ್ಲೇ ಯೋಚಿಸಿ ಕೊರಗುತ್ತೇನೆ! ಈಗಂತೂ ನಮ್ಮ ಮನೆಯಲ್ಲಿ ಶಿಕಾರಿ ನಿರ್ಭಂದಿಸಿದ್ದೆನೆ. ಎರಡೂ ಕೋವಿಗಳೂ ಕೇವಲ ತಮ್ಮ ಇರುವಿಕೆಯನ್ನು ತೋರಿಸಿಕೊಳ್ಳಲು ಮಾತ್ರ ಎಂಬಂತೆ ನಮ್ಮ ಮನೆ ಜಗುಲಿಯ ತೊಲೆಯಲ್ಲಿ ರಾರಾಜಿಸುತ್ತಿವೆ! ದೀಪಾವಳಿಯ ದಿನ ಪೂಜೆಗೆ ಕುಳಿತುಕೊಳ್ಳುತ್ತವೆ, ಚುನಾವಣೆಯ ಸಮಯದಲ್ಲಿ ಪೋಲಿಸ್ ತಾಣೆಯೆಂಬ ನೆಂಟರ ಮನೆಗೆ ಹೋಗಿ ಬರುತ್ತವೆ ಅಷ್ಟೆ.


(..........ಮುಗಿಯಿತು...........)  

16 comments:

  1. ಮನ ನಡುಗಿಸುವ, ಮೈ ನವಿರೇಳಿಸುವ ಅನುಭವವನ್ನು ಅಷ್ಟೇ ಚೆನ್ನಾಗಿ ನಮ್ಮೊಂದಿಗೆ
    ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಇಂತಹ ವಿಶೇಷ ಪ್ರಸಂಗಗಳು ಇನ್ನೂ ಇದ್ದರೆ ದಯವಿಟ್ಟು ತಿಳಿಸಿರಿ.

    ReplyDelete
  2. ಬಹಳ ಅದ್ಭುತವಾದ ಬರವಣಿಗೆ. ಬಾಲ್ಯದ ಶಿಕಾರಿ ಇಷ್ಟೊ೦ದು ನೆನಪಿಟ್ಟು ಹೇಗೆ ಬರೆದಿರುವಿರಿ ಎ೦ದುಕೊಳ್ಳುತ್ತಿರುವಾಗಲೇ ನಿಮ್ಮ ಮುಳ್ಳು ಚುಚ್ಚಿಸಿಕೊ೦ಡ ಪ್ರಸ೦ಗ ಬ೦ತು. ತಮ್ಮ ಚೆಡ್ಡಿ - ಹ೦ದಿ ನುಗ್ಗಿದ್ದು, ಮುಳ್ಳು ಚುಚ್ಚಿಸಿಕೊ೦ಡು ಪ್ರಜ್ನೇ ತಪ್ಪಿದ್ದು ಎಲ್ಲಾ ಸೇರಿ ನಿಮಗೆ ಮರೆಯದ ಅನುಭವ. ಅದರಿ೦ದ ನಮಗೊ೦ದಿಷ್ಟು ರ೦ಜನೆಯ ಕಥೆ! ಚೆನ್ನಾಗಿದೆ. ಸಧ್ಯ ಲಾಲಭಾಗ ನೋಡಿದ್ರೋ ಇಲ್ವೊ? ಇಲ್ಲದಿದ್ರೆ ಬೇಗ ನೋಡ್ಬಿಡಿ ಮತ್ತೆ ಇನ್ನೊಮ್ಮೆ ಅದು ಮನದಲ್ಲಿ ಕೂತು ಯಾವಾಗೋ ನೆನಪಾಗಬಾರ್ದು ನೋಡಿ. ಅಷ್ಟು ಸಮಯ ಹೆಚ್ಚಿಗೆ ಜೀವ ಉಳಿಸೋಕೆ ಸಿಗುತ್ತೆ! ಅಲ್ವಾ..

    ReplyDelete
  3. ಒಳ್ಳೇ ಬರಹ.
    ನಿಮ್ಮ ಊರು ಯಡುರ?

    ReplyDelete
  4. ಸುನಾಥ್ ಸರ್,
    ಜೀವಮಾನದಲ್ಲೇ ಮರೆಯಲಾಗದ ಘಟನೆಯೊಂದನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಇನ್ನೂ ಇಂತಹ ಹಲವಾರು ಸನ್ನಿವೇಶಗಳಿವೆ. ಅವನ್ನೂ ಕೂಡ ಹಂಚಿಕೊಳ್ಳುತ್ತೇನೆ.
    ನನ್ನ ಬ್ಲಾಗಿಗೆ ಬಂದು ಓದಿ ಪ್ರೋತ್ಸಾಹಿಸಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು.
    ಮುಂದೆಯೂ ಹೀಗೆ ಬಂದು ಬೆನ್ನು ಅಭಿಪ್ರಾಯ ತಿಳಿಸುತ್ತಿರಿ.

    ReplyDelete
  5. ಸೀತಾರಾಂ ಸರ್,
    ಕೆಲವೊಂದು ಮರೆಯಲಾಗದಂತ ಘಟನೆಗಳು ಮನಸ್ಸಿನಲ್ಲಿ ಯತಾವತ್ತಾಗಿ ಅಚ್ಚೋತ್ತಿರುತ್ತವೆ. ಈ ಘಟನೆಯೂ ಕೂಡ ಅಂತೆಯೇ. ಕೊನೆ ಉಸಿರಿರುವವರೆಗೂ ನೆನಪಿರುತ್ತದೆ.
    ನಾನು ಮ್ಒದಳಬಾರಿ ಬೆಂಗಳೂರಿಗೆ ಬಂದಾಗ ಬಂದ ದಿನವೇ ಲಾಲ್ ಬಾಗಿಗೆ ಹೋಗಿ ದಿನವಿಡೀ ಸುತ್ತಾಡಿದ್ದೆ! ನನಗೆ ಕೆಲಸಕ್ಕೆ ರಜೆ ಇದ್ದ ದಿನ ಅಲ್ಲೇ ಕುಳಿತಿರುತ್ತಿದ್ದೆ!
    ಈಗಲೂ ಬೆಂಗಳೂರಿಗೆ ಬಂದಾಗ ಲಾಲ್ ಬಾಗಿಗೆ ಹೊಗುವುದನ್ನ ಮರೆಯೋದಿಲ್ಲ!
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  6. subramanya sir,
    ನಿಮ್ಮ ಅಮೂಲ್ಯವಾದ ಪ್ರತಿಕ್ರಿಯೆಗೆ ಧನ್ಯವಾದಗಳು.
    ಹೌದು, ನಮ್ಮೂರು ಯಡೂರಿನ ಹತ್ತಿರ ಗಿಣಿಕಲ್ ಅಂತ ಒಂದು ಹಳ್ಳಿ.
    what about yours?

    ReplyDelete
  7. ತುಂಬ ರೋಮಾಂಚಕವಾಗಿತ್ತು ಪ್ರವೀಣ್ ಅವರೆ ನಿಮ್ಮ ಸಾಹಸಗಾಥೆ. ಇಂತಹ ಇನ್ನಷ್ಟು ಅನುಭವಗಳಿದ್ದರೆ ದಯವಿಟ್ಟು ಹಂಚಿಕೊಳ್ಳಿ.

    ReplyDelete
  8. ಪ್ರವೀಣ್ ಬಹಳ ಚನ್ನಾಗಿದೆ ನಿಮ್ಮ ಸಾಹಸಗಾಥೆ...ಹೌದು ನೋಡಿ ಇದೇ ತರಹದ ಅನುಭವ ನನಗೂ ಆಗಿತ್ತು ಚಿಕ್ಕ ವಿಪತ್ತಿನಿಂದ ಪಾರಾಗಲು ಹೋಗಿ ದೊಡ್ಡದರಲ್ಲಿ ಸಿಕ್ಕಿಬೀಳುವುದು ...ಹಹಹ
    ಚನಾಗಿ ಮೂಡಿ ಬಂತು ಸರಣಿ

    ReplyDelete
  9. ಧನ್ಯವಾದಗಳು ಸುಬ್ರಮಣ್ಯ ಸರ್,
    ಖಂಡಿತಾ ಹಂಚಿಕೊಳ್ಳುತ್ತೇನೆ. ಹೀಗೆ ಬಂದು ಪ್ರೋತ್ಸಾಹಿಸುತ್ತಿರಿ.

    ReplyDelete
  10. ಅಜಾದ್ ಸರ್,
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  11. tumbaa sundara vivarane........... bhayavaaytu, oduttaa oduttaa.... barali innashtu........
    banni, nanna blog manege......
    sigoNa august 22 kke........

    ReplyDelete
  12. dinakar sir,
    ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ. ಹೀಗೆ ಬರುತ್ತಿರಿ.

    ReplyDelete
  13. ಬೆಂಗಳೂರು ಲಾಲ್ ಬಾಗ್..ಕಾಡುಸಂಪಿಗೆ ಮರ.. ಪದಗಳನ್ನು ಉಪಯೋಗಿಸಿಕೊಂಡ ರೀತಿ ತುಂಬಾ ಚೆನ್ನಾಗಿತ್ತು..
    ಶಿಕಾರಿಗೆ ಒಳ್ಳೆಯ ಬೇಟೆ..
    ನಿಮ್ಮವ,
    ರಾಘು.

    ReplyDelete
  14. ರಾಘು ಅವರೇ,
    ಧನ್ಯವಾದಗಳು. ಹೀಗೆ ಬರುತ್ತಿರಿ.

    ReplyDelete
  15. abbaa antoo romanchakaari muktaaya anni.
    chennagittu nimma anubhava Odalu.
    take care
    :-)
    malathi S

    ReplyDelete